ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಚರ್ಚೆ: ವಸ್ತುಸ್ಥಿತಿ ಒಪ್ಪುವ ದೃಷ್ಟಿಕೋನ ಅಗತ್ಯ

ತಮ್ಮ ಇತ್ತೀಚಿನ ಕೃತಿಯಲ್ಲಿ ಜೈಶಂಕರ್ ಅಭಿಮತ
Last Updated 13 ಸೆಪ್ಟೆಂಬರ್ 2020, 12:20 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕವಾಗಿ ಸಮತೋಲನ ಸಾಧಿಸಲು ಹಾಗೂ ಚೀನಾ ಮತ್ತು ಭಾರತದ ಬಾಂಧವ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಬಹು ದೃಷ್ಟಿಕೋನ ಮತ್ತು ಪರಸ್ಪರ ಹೊಂದಾಣಿಕೆಯಿಂದ ವಸ್ತುಸ್ಥಿತಿ ಒಪ್ಪಿಕೊಳ್ಳಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿರುವ ತನ್ನ ‘ದ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆ್ಯನ್ ಅನ್‌ಸರ್ಟನ್ ವರ್ಲ್ಡ್’ ಕೃತಿಯಲ್ಲಿ ಅವರು, ‘ಸದ್ಯ ಚೀನಾದ ಮೇಲೆ ಭಾರತವಷ್ಟೇ ನಿಬಂಧನೆ ಹೇರುತ್ತಿಲ್ಲ. ಇಡೀ ವಿಶ್ವವೇ ಹಾಗೆ ಮಾಡುತ್ತಿದೆ’ ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾ ಗಡಿಯಲ್ಲಿ ಪೂರ್ವ ಲಡಾಖ್‌‌ನಲ್ಲಿ ಉದ್ವಿಗ್ನ ಸ್ಥಿತಿ ತಲೆದೋರುವ ಮೊದಲು ಅಂದರೆ ಮೇ ಮೊದಲಾರ್ಧದಲ್ಲಿ ಅವರು ಈ ಕೃತಿಯನ್ನು ರಚಿಸಿದ್ದಾರೆ.

‘ನಿಬಂಧನೆಯು ಏಕರೂಪವಾಗಿದ್ದರೆ, ಪರ್ಯಾಯವಾಗಿ ಆಂತರಿಕವಾಗಿ ತಮ್ಮ ಸಾಮರ್ಥ್ಯ ವೃದ್ಧಿ, ಬಲಪಡಿಸಿಕೊಳ್ಳುವ ಕಾರ್ಯವನ್ನು ರಾಷ್ಟ್ರಗಳು ಮಾಡುತ್ತವೆ. ಒಟ್ಟಾರೆ, ಈ ಕಸರತ್ತಿನಲ್ಲಿ ತನ್ನ ಭೌಗೋಳಿಕ ವ್ಯಾಪ್ತಿ, ಭೂಪ್ರದೇಶ, ಮಹತ್ವ, ಇತಿಹಾಸ, ಸಂಸ್ಕೃತಿ ದೃಷ್ಟಿಯಿಂದ ಭಾರತ ವಿಶೇಷ ಗಮನಸೆಳೆಯಲಿದೆ’ ಎಂದು ಜೈಶಂಕರ್ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಾಶನ ಸಂಸ್ಥೆ ಈ ಕೃತಿ ಪ್ರಕಟಿಸಿದೆ. ವಿವಿಧ ಸಮಾವೇಶ, ವಾಣಿಜ್ಯ ವೇದಿಕೆಗಳಲ್ಲಿ ಎರಡು ವರ್ಷಗಳಲ್ಲಿ ನೀಡಿದ ಭಾಷಣಗಳನ್ನು ಈ ಕೃತಿ ಆಧರಿಸಿದೆ. ‘ಚೀನಾದೊಂದಿಗೆ ಮಾತುಕತೆ ಕುರಿತಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಜವಹರಲಾಲ್ ನೆಹರೂ ಅವರು ಚರ್ಚಿಸಿದ್ದ ನವೆಂಬರ್ 1950ರ ಬೆಳವಣಿಗೆ ನಂತರ ಸಾಕಷ್ಟು ಬದಲಾವಣೆಗಳು ಆಗಿವೆ. ಇವುಗಳಿಂದ ಭಾರತಕ್ಕೆ ಹೆಚ್ಚಾಗಿ ಅನನುಕೂಲವೇ ಆಗಿದೆ’ ಎಂದು ಹೇಳಿದ್ದಾರೆ.

‘ಹಿಂದಿನಂತೆ ಇಂದು ಕೂಡಾ ವಾಸ್ತವಿಕತೆ ಮತ್ತು ಆಶಾವಾದತನ, ದ್ವಿಪಕ್ಷೀಯ ಮತ್ತು ಜಾಗತಿಕ ದೃಷ್ಟಿಕೋನ ಪ್ರಸ್ತುವೇ ಆಗಿದೆ. ಕಳೆದುಹೋಗಿರುವ ಕಾಲಘಟದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸುಲಭದ ಕೆಲಸವಾಗಿಲ್ಲ. ಆದರೆ, ಹಿಂದಿನ ಅನುಭವಗಳು ಇದೇ ಸಂದರ್ಭದಲ್ಲಿ ಕಾರ್ಯತಂತ್ರ ಮತ್ತು ದೂರದೃಷ್ಟಿ ಚಿಂತನೆಗೆ ನೆರವಾಗುತ್ತವೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT