ಶುಕ್ರವಾರ, ಅಕ್ಟೋಬರ್ 23, 2020
28 °C

ಜಿಎಸ್‌ಟಿ ಮಂಡಳಿ ಸಭೆ: ಸಾಲದ ಆಯ್ಕೆಗೆ ಕೆಲ ರಾಜ್ಯಗಳ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

GST

ನವದೆಹಲಿ: ಜಿಎಸ್‌ಟಿ ಮಂಡಳಿಯ ಸಭೆಯು ಸೋಮವಾರ ನಡೆಯಲಿದ್ದು, ರಾಜ್ಯಗಳ ತೆರಿಗೆ ಆದಾಯದಲ್ಲಿ ಆಗಿರುವ ಕೊರತೆಯನ್ನು ಹೇಗೆ ಭರ್ತಿ ಮಾಡಿಕೊಳ್ಳಬೇಕು ಎಂಬ ವಿಚಾರವಾಗಿ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುವ ಸಾಧ್ಯತೆಗಳಿವೆ.

ಬಿಜೆಪಿ ಆಡಳಿತವಿರುವ ಹಾಗೂ ಕೊರತೆ ಭರ್ತಿ ವಿಚಾರವಾಗಿ ಕೇಂದ್ರವನ್ನು ಬೆಂಬಲಿಸಿರುವ ಪಕ್ಷಗಳ ಆಡಳಿತ ಇರುವ 21 ರಾಜ್ಯಗಳು ಕೊರತೆ ಭರ್ತಿಗೆ ಒಟ್ಟು ₹ 97 ಸಾವಿರ ಕೋಟಿಯನ್ನು ಸಾಲವಾಗಿ ಪಡೆಯಲು ತೀರ್ಮಾನಿಸಿವೆ.

ಕೊರತೆ ಮೊತ್ತವನ್ನು ಸಾಲವಾಗಿ ಪಡೆಯಬೇಕು ಎಂದು ರಾಜ್ಯಗಳ ಮುಂದೆ ಕೇಂದ್ರ ಇರಿಸಿರುವ ಆಯ್ಕೆಯನ್ನು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆಡಳಿತ ಇಲ್ಲದ ರಾಜ್ಯಗಳು ಮಂಡಳಿಯ ಸಭೆಯಲ್ಲಿ ವಿರೋಧಿಸಲಿವೆ ಎಂದು ಮೂಲಗಳು ತಿಳಿಸಿವೆ. ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳಿಗೆ ಆಗಿರುವ ಕೊರತೆಯನ್ನು ಭರ್ತಿ ಮಾಡಿಕೊಡಬೇಕಿರುವ ಸಾಂವಿಧಾನಿಕ ಹೊಣೆ ಇರುವುದು ಕೇಂದ್ರದ ಮೇಲೆ ಎಂಬುದು ಅವುಗಳ ವಾದ.

ಜಿಎಸ್‌ಟಿ ವ್ಯವಸ್ಥೆಯಿಂದಾಗಿ ಈ ವರ್ಷದ ಆದಾಯದಲ್ಲಿ ರಾಜ್ಯಗಳಿಗೆ ಆಗಿರುವ ಕೊರತೆ ₹ 97 ಸಾವಿರ ಕೋಟಿ ಎಂದು ಕೇಂದ್ರ ಅಂದಾಜಿಸಿದೆ. ಕೋವಿಡ್‌–19 ಕಾರಣದಿಂದಾಗಿ ಆಗಿರುವ ಕೊರತೆಯು ₹ 1.38 ಲಕ್ಷ ಕೋಟಿ (ಒಟ್ಟು ಕೊರತೆ ₹ 2.35 ಲಕ್ಷ ಕೋಟಿ). ನಷ್ಟದ ಭರ್ತಿಗೆ ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಕೇಂದ್ರ ಇರಿಸಿದೆ. ಮೊದಲನೆಯದು, ರಾಜ್ಯಗಳು ₹ 97 ಸಾವಿರ ಕೋಟಿಯನ್ನು ಆರ್‌ಬಿಐನಿಂದ ಸಾಲವಾಗಿ ಪಡೆಯಬಹುದು. ಈ ಸಾಲವನ್ನು ಮುಂದೆ ಕೇಂದ್ರವೇ ತೀರಿಸಲಿದೆ. ಎರಡನೆಯದು, ರಾಜ್ಯಗಳು ಒಟ್ಟು ₹ 2.35 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆಯಬಹುದು. ಈ ಸಾಲದ ಅಸಲನ್ನು ಕೇಂದ್ರವು ತೀರಿಸುತ್ತದೆ. 

ಕೇಂದ್ರ ಇರಿಸಿರುವ ಆಯ್ಕೆಯನ್ನು ಪಶ್ಚಿಮ ಬಂಗಾಳ, ಕೇರಳ, ದೆಹಲಿ, ತೆಲಂಗಾಣ, ಛತ್ತೀಸಗಡ ಮತ್ತು ತಮಿಳುನಾಡು ಸರ್ಕಾರಗಳು ವಿರೋಧಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು