ಮಂಗಳವಾರ, ಜನವರಿ 19, 2021
17 °C

ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ: ಅಹಮದಾಬಾದ್‌ಗೆ ಮೋದಿ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಕೊರೊನಾ ಸೋಂಕಿನ ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿನ ಜೈಡಸ್‌ ಕ್ಯಾಡಿಲಾ ಸಂಸ್ಥೆಯ ಉತ್ಪಾದನಾ ಘಟಕಕ್ಕೆ ಶನಿವಾರ ಭೇಟಿ ನೀಡಿದ್ದರು.

ಪಿಪಿಇ ಕಿಟ್‌ ಧರಿಸಿದ್ದ ಮೋದಿ ಅವರು ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದ್ದು, ಬಳಿಕ ಸಂಸ್ಥೆಯ ಪ್ರವರ್ತಕರು ಮತ್ತು ಕಾರ್ಯನಿರ್ವಾಹಕ ಪ್ರತಿನಿಧಿಗಳ ಜೊತೆಗೆ ಚರ್ಚಿಸಿ ಮಾಹಿತಿ ಪಡೆದರು.

ದೆಹಲಿಯಿಂದ ವಿಮಾನದಲ್ಲಿ ಬಂದಿಳಿದ ಮೋದಿ ನೇರವಾಗಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಸುಮಾರು ಒಂದು ಗಂಟೆ ಘಟಕದಲ್ಲಿ ಉಳಿದಿದ್ದ ಅವರು ನಂತರ ಹೈದರಾಬಾದ್‌ಗೆ ತೆರಳಲು ನಿರ್ಗಮಿಸಿದರು.

ಕೋವಿಡ್ ವಿರುದ್ಧದ ಲಸಿಕೆ ‘ಝೈಕೋವ್‌–ಡಿ’ಯ ಮೊದಲನೇ ಹಂತದ ಪ್ರಯೋಗ ಪೂರ್ಣಗೊಂಡಿದ್ದು, 2ನೇ ಹಂತದ ಪ್ರಯೋಗವು ಆಗಸ್ಟ್‌ನಲ್ಲಿ ಆರಂಭವಾಗಿದೆ ಎಂದು ಜೈಡಸ್‌ ಕ್ಯಾಡಿಲಾ ಸಂಸ್ಥೆ ತಿಳಿಸಿದೆ.

ಹೈದರಾಬಾದ್‌ನಲ್ಲಿ ಮೋದಿ ಅವರು ಭಾರತ್‌ ಬಯೋಟೆಕ್‌ ಸಂಸ್ಥೆಯ ಘಟಕಕ್ಕೆ ಭೇಟಿ ನೀಡುವರು. ಬಳಿಕ ಅವರು ಪುಣೆಗೆ ತೆರಳಲಿದ್ದು, ಅಲ್ಲಿ ಅವರು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾಗೆ (ಎಸ್ಐಐ) ಭೇಟಿ ನೀಡುವರು.

ಕೊರೊನಾ ಸೋಂಕು ವಿರುದ್ಧದ ಲಸಿಕೆಯ ಬಿಡುಗಡೆಗೆ ಮುನ್ನ ಅದರ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಯ  ಕುರಿತು ಮಾಹಿತಿ ಪಡೆಯುವ ಕ್ರಮವಾಗಿ ಪ್ರಧಾನಿ ಮೋದಿ ಈ ಭೇಟಿ ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು