ಬುಧವಾರ, ಜೂನ್ 23, 2021
28 °C

ಗುಜರಾತ್‌: ಮಗನ ಆನುವಂಶಿಕ ಚಿಕಿತ್ಸೆಗಾಗಿ ₹16 ಕೋಟಿ ಸಂಗ್ರಹಿಸಿದ ‌ದಂಪತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲುನಾವಾಡಾ(ಗುಜರಾತ್‌): ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ತಮ್ಮ 5 ತಿಂಗಳ ಮಗನ ಚಿಕಿತ್ಸೆಗಾಗಿ ಗುಜರಾತ್‌ ಮೂಲದ ದಂಪತಿಯು ‘ಕ್ರೌಡ್‌ ಫಂಡಿಂಗ್‌’ ಮೂಲಕ ₹16 ಕೋಟಿ ಸಂಗ್ರಹಿಸಿದ್ದಾರೆ.

ಗುಜರಾತ್‌ನ ಮಹಿಸಾಗರ್‌ ಜಿಲ್ಲೆಯ ಲುನಾವಾಡಾ ಪಟ್ಟಣದ ನಿವಾಸಿ  ರಾಜ್‌ದೀಪ್‌ ಸಿನ್ಹಾ ರಾಥೋಡ್‌ ಮತ್ತು ಅವರ ಪತ್ನಿ ಜಿನಾಲ್ಬಾ ಅವರಿಗೆ ತಮ್ಮ ಮಗ ಧೈರ್ಯರಾಜ್‌ ಚಿಕಿತ್ಸೆಗೆ ಹಣದ ಅವಶ್ಯಕತೆ ಇತ್ತು.

ಈ ಕಾಯಿಲೆಯ ಚಿಕಿತ್ಸೆಗೆ ಬೇಕಾಗಿರುವ ಜೀನ್ ಥೆರಪಿ ಇಂಜೆಕ್ಷನ್ ಖರೀದಿಸಲು ದಂಪತಿಯು, 42 ದಿನಗಳಲ್ಲಿ ₹16 ಕೋಟಿ ಸಂಗ್ರಹಿಸಿದ್ದಾರೆ. ಈ ಅಭಿಯಾನವನ್ನು ಅವರು ಮಾರ್ಚ್‌ ತಿಂಗಳಿನಲ್ಲಿ ಆರಂಭಿಸಿದ್ದರು.

‘ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮಗನಿಗೆ ಜೀನ್ ಥೆರಪಿ ಇಂಜೆಕ್ಷನ್ ನೀಡಲಾಯಿತು’ ಎಂದು ರಾಥೋಡ್‌ ಅವರು ತಿಳಿಸಿದರು.

‘ಜೀನ್‌ ಥೆರಪಿ ಇಂಜೆಕ್ಷನ್‌ ಅನ್ನು ಸ್ವಿಟ್ಜರ್ಲೆಂಡ್‌ ನೊವಾರ್ಟಿಸ್ ಸಂಸ್ಥೆಯು ಉತ್ಪಾದಿಸುತ್ತದೆ. ಭಾರತದಲ್ಲಿ ಇದರ ಬೆಲೆ ₹16 ಕೋಟಿ. ಇದರ ಮೇಲಿನ ಕಸ್ಟಮ್ಸ್‌ ಸುಂಕ ₹6.5 ಕೋಟಿ. ಈ ಸುಂಕವನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರವು ನಮಗೆ ಸಹಾಯ ಮಾಡಿದೆ. ಈ ಇಂಜೆಕ್ಷನ್‌ ವಿಶ್ವದಲೇ ಅತಿ ದುಬಾರಿ ಔಷಧಿ’ ಎಂದು  ರಾಥೋಡ್‌ ಹೇಳಿದರು.

ಇದೊಂದು ಅಪರೂಪದ ಆನುವಂಶಿಕ ಕಾಯಿಲೆಯಾಗಿದೆ. ಈ ಕಾಯಿಲೆಗೆ ತುತ್ತಾದ ವ್ಯಕ್ತಿಗೆ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ನಷ್ಟದಿಂದಾಗಿ ತನ್ನ ದೇಹದ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಸ್ನಾಯುವಿನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಉಸಿರಾಟದ ಜೊತೆಗೆ ಅಂಗಗಳ ಚಲನೆಯ ಮೇಲೂ ಪರಿಣಾಮ ಬೀರುತ್ತದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು