ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆ: 2002ರಲ್ಲಿ ಹಿಂಸೆಗಿಳಿದವರಿಗೆ ತಕ್ಕ ಪಾಠ - ಅಮಿತ್ ಶಾ

ಗೋಧ್ರೋತ್ತರ ಹಿಂಸಾಚಾರವನ್ನು ನೆನಪಿಸಿಕೊಂಡ ಗೃಹ ಸಚಿವ ಅಮಿತ್ ಶಾ
Last Updated 25 ನವೆಂಬರ್ 2022, 19:20 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಗೆ ಮತದಾನ ಹತ್ತಿರವಾಗುತ್ತಿದ್ದಂತೆಯೇ ‍ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಮುಖಂಡ ಅಮಿತ್ ಶಾ ಅವರು ಕಾಂಗ್ರೆಸ್‌ ಮೇಲೆ ಶುಕ್ರವಾರ ಹರಿಹಾಯ್ದಿದ್ದಾರೆ. ಹಿಂಸೆಯಲ್ಲಿ ತೊಡಗಿದ್ದವರಿಗೆ ಕಾಂಗ್ರೆಸ್ ಪಕ್ಷವು ಆಶ್ರಯ ಕೊಟ್ಟಿದೆ. ಆದರೆ, 2002ರಲ್ಲಿ ಇಂತಹ ಶಕ್ತಿಗಳಿಗೆ ತಕ್ಕ ಪಾಠ ಕಲಿಸಲಾಯಿತು. ಹೀಗಾಗಿಯೇ, ಆ ಬಳಿಕ ಅಂತಹ ಘಟನೆಗಳು ನಡೆಯಲಿಲ್ಲ ಎಂದು ಶಾ ಅವರು ಹೇಳಿದ್ದಾರೆ.

ಶಾ ಅವರು ಶುಕ್ರವಾರ ಕೇಂದ್ರ ಗುಜರಾತ್‌ನಲ್ಲಿ ಪ್ರಚಾರ ನಡೆಸಿದರು. ಅವರು ಭಾಗವಹಿಸಿದ ಇನ್ನೂ ಎರಡು ರ‍್ಯಾಲಿಗಳಲ್ಲಿಯೂ ಇದೇ ವಿಚಾರವನ್ನು ಅವರು ಹೇಳಿದರು. 2002ರ ಗೋಧ್ರೋತ್ತರ ಗಲಭೆಗಳನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ. ಈ ವರ್ಷ ಇದೇ ಮೊದಲ ಬಾರಿಗೆ 2002ರ ಹಿಂಸಾಚಾರದ ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಸರ್ಕಾರ ಇದ್ದಾಗ ಆಗಾಗ ಕೋಮುಗಲಭೆಗಳು ನಡೆಯುತ್ತಿದ್ದವು, ಆಗಾಗ ಕರ್ಫ್ಯೂ ಹೇರಲಾಗುತ್ತಿತ್ತು, ಕಾನೂನು–ಸುವ್ಯವಸ್ಥೆ ಸರಿ ಇರಲಿಲ್ಲ ಎಂದು ಶಾ ಹೇಳಿದ್ದಾರೆ.

‘ಕಾಂಗ್ರೆಸ್‌ ಆಳ್ವಿಕೆ ಇದ್ದಾಗ ಕೋಮು ಹಿಂಸೆ ನಡೆಯುತ್ತಿತ್ತೇ ಇಲ್ಲವೇ ಹೇಳಿ? 2002ರಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂಸಾಚಾರದ ಪ್ರಯತ್ನ ನಡೆಯಿತು. ಆಗ ಅವರಿಗೆ ಸರಿಯಾದ ಪಾಠ ಕಲಿಸಲಾಯಿತು. ಅದಾದ ಬಳಿಕ ಒಂದೇ ಒಂದು ಕೋಮು ಹಿಂಸಾಚಾರ ನಡೆದಿಲ್ಲ. ಹಿಂಸೆ ಯಲ್ಲಿ ತೊಡಗಿದ್ದವರನ್ನು ಉಚ್ಚಾಟಿಸಲಾಯಿತು. ಕರ್ಫ್ಯೂರಹಿತ ಗುಜರಾತ್‌ ಅನ್ನು ಬಿಜೆಪಿ ಸ್ಥಾಪಿಸಿದೆ’ ಎಂದು ಶಾ ಹೇಳಿದರು. ಖೇಡಾ ಜಿಲ್ಲೆಯ ಮಹುಧಾ ಮತ್ತು ಭರೂಚ್‌ ಜಿಲ್ಲೆಯ ವಗ್ರದಲ್ಲಿ ಕೂಡ ಇದೇ ಭಾಷಣವನ್ನು ಶಾ ಅವರು ಪುನರಾವರ್ತಿಸಿದರು.

ಈ ಹಿಂದೆ ಗುಜರಾತ್‌ನಲ್ಲಿ ಇದ್ದ ಗೂಂಡಾ ಅಬ್ದುಲ್‌ ಲತೀಫ್‌ ಹೆಸರನ್ನು ಶಾ ಉಲ್ಲೇಖಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಮಾತ್ರ ಎಂದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದರು.

ಕಾಂಗ್ರೆಸ್ ಪಕ್ಷವು ಸುದೀರ್ಘ ಕಾಲ ಆಳ್ವಿಕೆ ನಡೆಸಿದ್ದರೂ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಿಲ್ಲ. ಮತಬ್ಯಾಂಕ್‌ ರಾಜಕಾರಣ ಇದಕ್ಕೆ ಕಾರಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT