ಗುರುವಾರ , ಫೆಬ್ರವರಿ 9, 2023
30 °C

ಕಣದಿಂದ ಹಿಂದೆ ಸರಿದ ಎಎಪಿ ಅಭ್ಯರ್ಥಿ: ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌/ನವದೆಹಲಿ: ಸೂರತ್‌ ಪೂರ್ವ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕಂಚನ್‌ ಜರೀವಾಲಾ ಅವರು ತಮ್ಮ ನಾಮಪತ್ರವನ್ನು ವಾಪಸ್‌ ಪಡೆದಿದ್ದಾರೆ. ಭಾರಿ ನೂಕುನುಗ್ಗಾಟದ ಮಧ್ಯೆ ಅವರು ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ವಾಪಸ್‌ ಪಡೆಯುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿವೆ. ಕಂಚನ್‌ ಅವರನ್ನು ಅಪಹರಿಸಿ, ಬೆದರಿಕೆಯೊಡ್ಡಿ ನಾಮಪತ್ರ ವಾಪಸ್‌ ಪಡೆಯುವಂತೆ ಮಾಡಲಾಗಿದೆ ಎಂದು ಎಎಪಿ ಆರೋಪಿಸಿದೆ.

ಕಂಚನ್‌ ಮತ್ತು ಅವರ ಕುಟುಂಬದ ಸದಸ್ಯರು ಎರಡು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರು ಕಾಣೆಯಾಗಿದ್ದಾರೆ. ಅವರನ್ನು ಅಪಹರಿಸಲಾಗಿದೆ ಎಂದು ಶಂಕಿಸಲಾಗಿತ್ತು. ಆದರೆ, ಅವರು 500ಕ್ಕೂ ಹೆಚ್ಚು ಪೊಲೀಸರು ಮತ್ತು ಬಿಜೆಪಿ ಗೂಂಡಾಗಳ ಜತೆಗೆ ಬಂದು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಬಂದೂಕಿಟ್ಟು ಬೆದರಿಸಿ, ಅವರಿಂದ ಈ ಕೆಲಸ ಮಾಡಿಸಲಾಗಿದೆ. ಅಲ್ಲಿಂದ ಮತ್ತೆ ಅವರು ನಾಪತ್ತೆಯಾಗಿದ್ದಾರೆ ಎಂದು ಎಎಪಿ ಆರೋಪಿಸಿದೆ.

‘ಈ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲಿದೆ. ಅಂತಹ ಸೋಲಿನಿಂದ ಹೆದರಿರುವ ಬಿಜೆಪಿಯು, ಎದುರಾಳಿ ಅಭ್ಯರ್ಥಿಗಳನ್ನು ಅಪಹರಿಸುವಷ್ಟು ಹೀನಾಯ ಸ್ಥಿತಿಗೆ ಇಳಿದಿದೆ’ ಎಂದು ಎಎಪಿ ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.

‘ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಮ್ಮ ಅಭ್ಯರ್ಥಿಯನ್ನು ವಾಪಸ್ ಕರೆ ತರಬೇಕು’ ಎಂದು ಟ್ವೀಟ್‌ನಲ್ಲಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಆಯೋಗದ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ. ‘ಅಭ್ಯರ್ಥಿ ಕಾಣೆಯಾಗಿ 24 ಗಂಟೆ ಕಳೆದಿದೆ. ಹೀಗಿದ್ದೂ ಆಯೋಗವು ಇನ್ನೂ, ‘ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇವೆ’ ಎಂದಷ್ಟೇ ಹೇಳುತ್ತಿದೆ’ ಎಂದು ಸಿಸೋಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಟಿದಾರ್ ನಾಯಕಿ ಎಎಪಿಗೆ
ಪಾಟಿದಾರ್‌ ಮೀಸಲಾತಿ ಹೋರಾಟದ ಮುಂದಾಳುಗಳಲ್ಲಿ ಒಬ್ಬರಾಗಿದ್ದ ರೇಷ್ಮಾ ಪಟೇಲ್‌ ಅವರು ಬುಧವಾರ ಎಎಪಿ ಸೇರಿದ್ದಾರೆ. ಅಹಮದಾಬಾದ್‌ನಲ್ಲಿನ ಎಎಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಷ್ಮಾ ಅವರನ್ನು ರಾಘವ್ ಛಡ್ಡಾ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಈಚೆಗಷ್ಟೇ ಎನ್‌ಸಿಪಿ ತೊರೆದಿದ್ದರು. 2015ರಲ್ಲಿ ಗುಜರಾತ್‌ನ ಪಾಟಿದಾರ್‌ ಮೀಸಲಾತಿ ಹೋರಾಟದಲ್ಲಿ ರೇಷ್ಮಾ ಅವರು, ಹೋರಾಟದ ಮುಂಚೂಣಿಯ ನಾಯಕ ಹಾರ್ದಿಕ್ ಪಟೇಲ್‌ ಜತೆ ಗುರುತಿಸಿಕೊಂಡಿದ್ದರು. 2017ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. 2019ರಲ್ಲಿ ಬಿಜೆಪಿ ತೊರೆದು, ಎನ್‌ಸಿಪಿ ಸೇರಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಅವರು ಟಿಕೆಟ್‌ ನಿರೀಕ್ಷಿಸಿದ್ದರು. ಕಾಂಗ್ರೆಸ್‌ ಜತೆ ಮೈತ್ರಿಮಾಡಿಕೊಂಡಿರುವ ಎನ್‌ಸಿಪಿ ಕೇವಲ ಎರಡು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಟಿಕೆಟ್‌ ಸಿಗದೇ ಇದ್ದ ಕಾರಣ ಅವರು ಈಗ ಎಎಪಿ ಸೇರಿದ್ದಾರೆ.

‘ಓಲೈಕೆ ರಾಜಕಾರಣ ಕಿತ್ತೊಗೆದಿದ್ದೇವೆ’
ಗುಜರಾತ್‌ನಲ್ಲಿ ನಾವು, ನಮ್ಮ 27 ವರ್ಷಗಳ ಆಳ್ವಿಕೆಯಲ್ಲಿ ಓಲೈಕೆ ರಾಜಕಾರಣವನ್ನು ಕಿತ್ತೊಗೆದಿದ್ದೇವೆ. ಈ ಅವಧಿಯಲ್ಲಿ ಕಾನೂನಿನ ಆಳ್ವಿಕೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

‘ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ ಅವಹೇಳನ ಮಾಡುತ್ತಿತ್ತು. 550 ವರ್ಷಗಳ ರಾಮಜನ್ಮಭೂಮಿ ವಿವಾದಕ್ಕೆ ನರೇಂದ್ರ ಮೋದಿ ಕೊನೆಹಾಡಿದ್ದಾರೆ. 2024ರ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ. ರಾಹುಲ್ ಬಾಬಾ (ರಾಹುಲ್ ಗಾಂಧಿ) ಅಲ್ಲಿಗೆ ಹೋಗಿ ದರ್ಶನ ಪಡೆಯಲಿ’ ಎಂದು ಅಮಿತ್ ಶಾ ಹೇಳಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್‌ ಆಳ್ವಿಕೆ ಇದ್ದಾಗ ವರ್ಷದ 365ರಲ್ಲಿ 265 ದಿನ ಕರ್ಫ್ಯೂ ಇರುತ್ತಿತ್ತು. ನಾವು ಕರ್ಫ್ಯೂ ಹೇರಲೇ ಇಲ್ಲ. ರಾಜ್ಯದ ಈಗಿನ ಯುವಕರಿಗೆ ಕರ್ಫ್ಯೂ ಎಂದರೆ ಎನು ಎಂಬುದೇ ತಿಳಿದಿಲ್ಲ’ ಎಂದಿದ್ದಾರೆ.

*

ಚುನಾವಣಾ ಕಚೇರಿಯಿಂದ ನಮ್ಮ ಅಭ್ಯರ್ಥಿಯನ್ನು ಎಳೆದುಕೊಂಡು ಹೋಗಲಾಗಿದೆ. ಗುಜರಾತ್‌ನಲ್ಲಿ ‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ’ ಎಂಬುದು ಅಣಕವಾಗಿಹೋಗಿದೆ.
–ರಾಘವ್ ಛಡ್ಡಾ, ಎಎಪಿ ವಕ್ತಾರ

*

ಕಂಚನ್‌ ಅವರ ನಾಮಪತ್ರ ತಿರಸ್ಕೃತಕ್ಕೆ ಬಿಜೆಪಿ ಯತ್ನಿಸಿತ್ತು, ಅದರಲ್ಲಿ ವಿಫಲವಾಯಿತು. ಈಗ ನಾಮಪತ್ರ ವಾಪಸ್‌ ಪಡೆಸಿಕೊಂಡಿದೆ. ಅವರನ್ನು ಅಪಹರಿಸಲಾಗಿದೆಯೇ?
–ಅರವಿಂದ ಕೇಜ್ರಿವಾಲ್‌, ಎಎಪಿ ಸಂಚಾಲಕ

*

ಎಎಪಿ ದೇಶ ಮತ್ತು ಗುಜರಾತ್ ವಿರೋಧಿ ಪಕ್ಷ. ಪ್ರಚಾರದ ವೇಳೆ ಜನರು ಈ ಬಗ್ಗೆ ಪ್ರಶ್ನಿಸುತ್ತಿದ್ದರು. ಹೀಗಾಗಿ ನಾನು ಅಂತಹ ಪಕ್ಷವನ್ನು ಪ್ರತಿನಿಧಿಸದೇ ಇರಲು ನಿರ್ಧರಿಸಿದೆ.
–ಕಂಚನ್ ಜರೀವಾಲಾ, ನಾಮಪತ್ರ ವಾಪಸ್‌ ಪಡೆದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು