ಗುಜರಾತ್: ಪ್ರಶ್ನೆ ಪತ್ರಿಕೆ ಸೋರಿಕೆ,15 ಮಂದಿ ಬಂಧನ

ಅಹಮದಾಬಾದ್: ಕಿರಿಯ ಗುಮಾಸ್ತ ನೇಮಕಾತಿಗಾಗಿ ಗುಜರಾತ್ ಸರ್ಕಾರವು ಭಾನುವಾರದಂದು (ಜ. 29) ನಡೆಸಲು ನಿರ್ಧರಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ವಡೋದರಾದಿಂದ 15 ಮಂದಿಯನ್ನು ಬಂಧಿಸಿದ್ದಾರೆ’ ಎಂದೂ ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಗುಜರಾತ್ ಪಂಚಾಯಿತಿ ಸೇವಾ ನೇಮಕಾತಿ ಮಂಡಳಿಯು (ಜಿಪಿಎಸ್‌ಎಸ್‌ಬಿ), ‘1,181 ಕಿರಿಯ ಗುಮಾಸ್ತ ಹುದ್ದೆಗಳಿಗೆ (ಆಡಳಿತ/ ಲೆಕ್ಕಪತ್ರ ನಿರ್ವಹಣೆ) 9.53 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ರಾಜ್ಯದ 2,965 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಪರೀಕ್ಷೆಗೂ ಮುನ್ನವೇ, ಭಾನುವಾರ ಬೆಳಿಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿ, ಪ್ರಶ್ನೆ ಪತ್ರಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ’ ಎಂದು ತಿಳಿಸಿದೆ.
ರಾಜ್ಯ ಪಂಚಾಯತ್ ಇಲಾಖೆಯ ಅಭಿವೃದ್ಧಿ ಆಯುಕ್ತ ಸಂದೀಪ್ ಕುಮಾರ್ ಅವರು, ‘ಮುಂಬರುವ 100 ದಿನಗಳಲ್ಲಿ ಪುನಃ ಪರೀಕ್ಷೆ ನಡೆಸಲಾಗುವುದು’ ಎಂದು ಹೇಳಿದ್ದಾರೆ. ಇದೇ ವೇಳೆ ಅಭ್ಯರ್ಥಿಗಳಿಗಾದ ಅನಾನುಕೂಲಕ್ಕಾಗಿ ಜಿಪಿಎಸ್‌ಎಸ್‌ಬಿ ವಿಷಾದ ವ್ಯಕ್ತಪಡಿಸಿದೆ.
‘ಕಳೆದ ಕೆಲವು ದಿನಗಳಿಂದ ಶಂಕಿತರ ಮೇಲೆ ತೀವ್ರ ನಿಗಾ ಇರಿಸಿದ್ದ ಎಟಿಎಸ್, ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಿದೆ. ಪರೀಕ್ಷೆಯು ನ್ಯಾಯಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲು ಎಟಿಎಸ್ ಕ್ರಮ ಕೈಗೊಂಡಿದೆ. ಬಂಧಿತರು ವಿವಿಧ ರಾಜ್ಯಗಳಿಂದ ಕಾರ್ಯನಿರ್ವಹಿಸುವ ಗುಂಪೊಂದರ ಭಾಗವಾಗಿದ್ದಾರೆ’ ಎಂದು ಎಟಿಎಸ್ ಎಸ್‌ಪಿ ಸುನಿಲ್ ಜೋಷಿ ಹೇಳಿದರು.
ಅಭ್ಯರ್ಥಿಗಳಿಂದ ಸರ್ಕಾರದ ವಿರುದ್ಧ ಘೋಷಣೆ: ‘ಪರೀಕ್ಷೆ ರದ್ದಾದ ವಿಷಯ ತಿಳಿಯುವ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಅನೇಕ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (ಎನ್‌ಎಸ್‌ಯುಐ), ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕಗಳ ಸದಸ್ಯರು ರಸ್ತೆಗಳನ್ನು ಬಂದ್ ಮಾಡಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ ವಿವಿಧೆಡೆ ಹಲವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ‍್ರಶ್ನೆ ಪ್ರತಿಕೆ ಸೋರಿಕೆಯಿಂದಾಗಿ ಕೋಪಗೊಂಡ ಕೆಲವು ಅಭ್ಯರ್ಥಿಗಳು, ಘಟನೆಗೆ ಜವಾಬ್ದಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಂದಿನ ಪರೀಕ್ಷೆಯ ವೇಳೆ ಉಚಿತ ಪ್ರಯಾಣ: ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳು ಮತ್ತು ಶಾಲಾ-ಕಾಲೇಜುಗಳ ಪರೀಕ್ಷಾ ದಿನಾಂಕಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ, ಪ್ರಸ್ತುತ ಮುಂದೂಡಲ್ಪಟ್ಟಿರುವ ಕಿರಿಯ ಗುಮಾಸ್ತ ನೇಮಕಾತಿ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಜಿಪಿಎಸ್‌ಎಸ್‌ಬಿ ಪ್ರಕಟಿಸುತ್ತದೆ ಎಂದು ರಾಜ್ಯ ಪಂಚಾಯತ್ ಇಲಾಖೆಯ ಅಭಿವೃದ್ಧಿ ಆಯುಕ್ತ ಸಂದೀಪ್ ಕುಮಾರ್ ಹೇಳಿದರು.
‘ಮುಂದಿನ ಪರೀಕ್ಷೆಗೆ, ಅಭ್ಯರ್ಥಿಗಳು ತಮ್ಮ ಗುರುತಿನ ಚೀಟಿ (ಪ್ರವೇಶ ಪತ್ರ) ಆಧಾರದ ಮೇಲೆ ಅಭ್ಯರ್ಥಿಗಳು ತಮ್ಮ ಊರಿನಿಂದ ಪರೀಕ್ಷಾ ಕೇಂದ್ರಗಳಿಗೆ ಗುಜರಾತ್ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷೆ ಬಳಿಕವೂ ಅವರು ತಮ್ಮ ಊರುಗಳಿಗೆ ಉಚಿತವಾಗಿ ಪ್ರಯಾಣಿಸಬಹುದು ಎಂಬ ನಿರ್ಧಾರವನ್ನು ಈಗಾಗಲೇ ಜಿಪಿಎಸ್‌ಎಸ್‌ಬಿ ತೆಗೆದುಕೊಂಡಿದೆ’ ಎಂದು ಅವರು ತಿಳಿಸಿದರು.
ತನಿಖೆಗೆ ಆಗ್ರಹ: ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಗುಜರಾತ್‌ನ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎಎಪಿ, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.