ಗಾಂಧಿನಗರ: ಮಹತ್ವದ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ನಾಯಕತ್ವದ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ.
ಇನ್ನು, ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎನ್ನಲಾಗಿದ್ದು, ನೂತನ ಮುಖ್ಯಮಂತ್ರಿ ಹೆಸರು ಇಲ್ಲಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವ ಮನ್ಸೂಖ್ ಮಾಂಡವೀಯ ಅವರು ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ. ಭಾವನಗರದವರಾದ ಅವರು, ಗುಜರಾತ್ ಬಿಜೆಪಿ ಹಿರಿಯ ನಾಯಕರಾಗಿದ್ದು, ಸದ್ಯ ರಾಜ್ಯ ಸಭಾ ಸದಸ್ಯರಾಗಿದ್ದಾರೆ.
ಅಲ್ಲದೇ ವಿಜಯ್ ರೂಪಾಣಿಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಪ್ರಭಾವಿ ನಾಯಕ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ (ನಿತಿನ್‌ಬಾಯಿ ಪಟೇಲ್) ಅವರು ಕೂಡ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕೋವಿಡ್ ನಿರ್ವಹಣೆಯಲ್ಲಿ ವಿಫಲ:ಸಿಎಂ ವಿಜಯ್ ರೂಪಾಣಿರಾಜೀನಾಮೆ ಕುರಿತು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದಕ್ಕೆ ವಿಜಯ್ ರೂಪಾಣಿ‘ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದೆ.
‘ಕೋವಿಡ್ ನಂತರ ಗುಜರಾತ್ ರಾಜ್ಯ ಸಾಕಷ್ಟು ತೊಂದರೆ ಅನುಭವಿಸಿತು, ಆದರೂ ರಾಜ್ಯವನ್ನು ಸಶಕ್ತಗೊಳಿಸಲು ಮುಖ್ಯಮಂತ್ರಿ ರೂಪಾಣಿಅವರು ಯಾವುದೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಿಲ್ಲ. ಯಾವುದೇ ನಷ್ಟ ಪರಿಹಾರವನ್ನು ಜನಕ್ಕೆ ನೀಡಲಿಲ್ಲ. ಇದರಿಂದ ಅವರನ್ನು ಕಿತ್ತೊಗೆಯಲಾಗಿದೆ. ಸಚಿವ ನಿತಿನ್ ಪಟೇಲ್ ಅವರನ್ನೂ ಕಿತ್ತೊಗೆಯಬೇಕು. ಅವರು ಕೂಡ ಯಾವುದೇ ಕೆಲಸ ಮಾಡಿಲ್ಲ‘ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಭರತ್ ಸೋಲಂಕಿ ಹೇಳಿದ್ದಾರೆ.
‘ಅಲ್ಲದೇ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿರುವುದು, ತಮ್ಮ ವೈಪಲ್ಯಗಳನ್ನು ಮರೆಮಾಚಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಹೈಕಮಾಂಡ್ ಮಾಡುತ್ತಿರುವ ನಾಟಕ‘ ಎಂದು ಸೋಲಂಕಿ ಆರೋಪಿಸಿದ್ದಾರೆ.
ವಿಜಯ್ ರೂಪಾನಿ ರಾಜೀನಾಮೆ:ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಂಗತಿಯನ್ನು ಘೋಷಿಸಿದರು. ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.ಐದು ವರ್ಷಗಳ ಕಾಲ ರಾಜ್ಯದ ಸೇವೆ ಮಾಡಲು ಪಕ್ಷ ನನಗೆಅವಕಾಶ ನೀಡಲಾಗಿದೆ. ನನ್ನ ಪಕ್ಷ ಏನು ಹೇಳಿದರೂಅದನ್ನು ನಾನು ಮಾಡುತ್ತೇನೆ ಎಂದು ರೂಪಾಣಿಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.