ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರೋ ರಾತ್ರಿ ಅಂತ್ಯಕ್ರಿಯೆ: ಭುಗಿಲೆದ್ದ ಆಕ್ರೋಶ

ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣ: ಮಂಗಳವಾರ ಮೃತಪಟ್ಟಿದ್ದ ದಲಿತ ಯುವತಿ
Last Updated 30 ಸೆಪ್ಟೆಂಬರ್ 2020, 15:57 IST
ಅಕ್ಷರ ಗಾತ್ರ

ಹತ್ರಾಸ್‌/ಲಖನೌ/ನೋಯ್ಡಾ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ದಲಿತ ಯುವತಿಯ ಅಂತ್ಯಕ್ರಿಯೆಯನ್ನು ರಾತ್ರೋ ರಾತ್ರಿ ನೆರವೇರಿಸಿರುವ ಉತ್ತರ ಪ್ರದೇಶ ಪೊಲೀಸರ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.

ಪೊಲೀಸರ ನಡೆಯನ್ನು ಯುವತಿಯ ಕುಟುಂಬದವರು, ಗ್ರಾಮಸ್ಥರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ 14ರಂದು ನಾಲ್ವರು ಯುವಕರು 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ನವದೆಹಲಿಯ ಸಫ್ದಾರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಳು. ಆರೋಪಿಗಳುಮೇಲ್ವರ್ಗಕ್ಕೆ ಸೇರಿದ್ದವರು ಎನ್ನಲಾಗಿದೆ.

‘ಅಂತಿಮ ವಿಧಿ ವಿಧಾನ ಪೂರೈಸಲು ಅವಕಾಶ ಮಾಡಿಕೊಡುವಂತೆ ಪೊಲೀಸರು ಹಾಗೂ ಅಧಿಕಾರಿಗಳ ಬಳಿ ಅಂಗಲಾಚಿದೆವು. ಅವರು ನಮ್ಮ ಮನವಿಗೆ ಸ್ಪಂದಿಸಲೇ ಇಲ್ಲ.ಮನೆಯವರನ್ನೆಲ್ಲಾ ಬ್ಯಾರಿಕೇಡ್‌ನ ಆಚೆ ನಿಲ್ಲಿಸಿದ್ದರು. ಶವದ ಅಂತಿಮ ದರ್ಶನ ಪಡೆಯಲೂ ಅವಕಾಶ ಕೊಡಲಿಲ್ಲ’ ಎಂದು ಮೃತ ಯುವತಿಯ ಸಹೋದರ ದೂರಿದ್ದಾರೆ.

‘ಅವರಿಗೆ ಏನು ಬೇಕು. ಅವಸರವಾಗಿ ಏಕೆ ಅಂತ್ಯಕ್ರಿಯೆ ನಡೆಸಿದರು ಎಂಬುದೇ ನಮಗೆ ತಿಳಿಯುತ್ತಿಲ್ಲ. ಇದೆಂಥಾ ರಾಜಕೀಯ. ಅವರು ಯುವತಿಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ನಿರಂತರವಾಗಿ ಹೇಳಿಕೆ ನೀಡುತ್ತಲೇ ಇದ್ದರು. ಈ ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿಯೇ ಹೀಗೆಲ್ಲಾ ಮಾಡಿದ್ದಾರೆ’ ಎಂದು ಯುವತಿಯ ಸಂಬಂಧಿಕರೊಬ್ಬರು ಕಿಡಿಕಾರಿದ್ದಾರೆ.

‘ಅಧಿಕಾರಿಗಳ ಸಮ್ಮುಖದಲ್ಲಿ ಯುವತಿಯ ಕುಟುಂಬದವರೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ’ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

‘ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್‌ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹತ್ರಾಸ್‌ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ್‌ ವೀರ್‌ ತಿಳಿಸಿದ್ದಾರೆ.

ತನಿಖೆಗೆ ಎಸ್‌ಐಟಿ ರಚನೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಕರಣದ ತನಿಖೆಗೆ ಮೂವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.

‘ವಿಚಾರಣೆಯನ್ನು ತ್ವರಿತಗತಿಯ ನ್ಯಾಯಾಲಯದಲ್ಲೇ ನಡೆಸಬೇಕು. ಸರ್ಕಾರಕ್ಕೆ ಏಳು ದಿನಗಳ ಒಳಗೆ ತನಿಖಾ ವರದಿ ಸಲ್ಲಿಸಬೇಕೆಂದು ಎಸ್‌ಐಟಿಗೆ ಸೂಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಟ್ವೀಟ್‌ನ0ಲ್ಲಿ ಹೇಳಲಾಗಿದೆ.

ಪ್ರತಿಭಟನಾಕಾರರ ಬಂಧನ

ನವದೆಹಲಿ (ಪಿಟಿಐ): ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾವು ಖಂಡಿಸಿ ರಾಜಧಾನಿಯಲ್ಲಿರುವ ಉತ್ತರ ಪ್ರದೇಶ ಭವನದ ಎದುರು ಪ್ರತಿಭಟನೆಗೆ ಮುಂದಾಗಿದ್ದ ಸುಮಾರು 60 ಮಂದಿಯನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಲ್ಕತ್ತದಲ್ಲೂ ಪ್ರತಿಭಟನೆ ನಡೆದಿದ್ದು ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಸಂಘಟನೆಯ ಕಾರ್ಯಕರ್ತರು ಯೋಗಿ ಆದಿತ್ಯನಾಥ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.

ಹತ್ರಾಸ್‌, ಬೂಲ್‌ ಗಾರ್ಹಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೂ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಲಖನೌದಲ್ಲಿ ಪ್ರತಿಭಟನಾನಿರತ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಬಾಲಿವುಡ್‌ ನಟಿ ಕಂಗನಾ ರನೌತ್ ಸೇರಿದಂತೆ ಹಲವು ಸಿನಿಮಾ ಹಾಗೂ ಕ್ರೀಡಾ ತಾರೆಯರೂ ಈ ಘಟನೆಯನ್ನು ಖಂಡಿಸಿದ್ದು ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಸಂತ್ರಸ್ತೆಯ ಕುಟುಂಬದವರೊಂದಿಗೆ ಹತ್ರಾಸ್‌ಗೆ ತೆರಳುತ್ತಿದ್ದ ಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮತ್ತು ಆ ಸಂಘಟನೆಯ ದೆಹಲಿ ಘಟಕದ ಮುಖಸ್ಥ ಹಿಮಾಂಶು ಬಲ್ಮಿಕಿ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಚಂದ್ರಶೇಖರ್‌ ಅವರ ಆಪ್ತರು ಆರೋಪಿಸಿದ್ದಾರೆ.

ಪ್ರತಿಕ್ರಿಯೆ

ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಬದಲು ನಿಮ್ಮ ಸರ್ಕಾರವು ಆಕೆಯ ಹಕ್ಕುಗಳನ್ನು ಕಸಿದುಕೊಳ್ಳಲು ಸಹಕರಿಸಿತು. ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ನಿಮಗೆ (ಯೋಗಿ ಆದಿತ್ಯನಾಥ್‌) ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ನೀಡಿ.
- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಯುವತಿಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸದೆಯೇ, ಅವರ ಅನುಮತಿಯನ್ನೂ ಪಡೆಯದೆಯೇ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಪೊಲೀಸರ ಕ್ರಮವನ್ನು ಖಂಡಿಸುತ್ತೇವೆ.
- ಮಾಯಾವತಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ

ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದಲೇ ತಡರಾತ್ರಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಆಚರಣೆಗಳಿಗೆ ವಿರುದ್ಧವಾಗಿ ಅಂತ್ಯಕ್ರಿಯೆ ನಡೆಸುವ ಮೂಲಕ ಬಿಜೆಪಿ ಸರ್ಕಾರವು ಬಹುದೊಡ್ಡ ಪಾಪ ಹಾಗೂ ಅಪರಾಧವೆಸಗಿದೆ.
- ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ಪೊಲೀಸರು ಯುವತಿಯ ಕುಟುಂಬದವರನ್ನು ಹೊರಗಿಟ್ಟು ತಡರಾತ್ರಿಯೇ ಅಂತ್ಯಕ್ರಿಯೆ ನಡೆಸಿದ್ದೇಕೆ. ಪೊಲೀಸರ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕರಿಂದ ವಿವರಣೆ ಕೇಳುತ್ತೇವೆ.
- ರೇಖಾ ಶರ್ಮಾ, ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ

ದೇಶದ ಮಗಳೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಸಂತ್ರಸ್ತೆಯ ಅತ್ಯ ಸಂಸ್ಕಾರ ನೆರವೇರಿಸುವ ಹಕ್ಕನ್ನೂ ಆಕೆಯ ಕುಟುಂಬದಿಂದ ಕಸಿದುಕೊಳ್ಳಲಾಗಿದೆ. ಇದು ಆ ಕುಟುಂಬಕ್ಕೆ ಮಾಡಿದ ಅವಮಾನ ಮತ್ತು ಅನ್ಯಾಯ.
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT