ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ಖರ ವಿರುದ್ಧದ ಮಾಧ್ಯಮ ವರದಿ: ಕೇಂದ್ರದ ನಿಲುವು ಕೇಳಿದ ಕೋರ್ಟ್‌

Last Updated 1 ಫೆಬ್ರುವರಿ 2021, 13:04 IST
ಅಕ್ಷರ ಗಾತ್ರ

ದೆಹಲಿ: ದೃಢೀಕರಿಸದ ವಿಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಕೆಲ ಮಾಧ್ಯಮಗಳು ಸಿಖ್‌ ಸಮುದಾಯದ ಮೇಲೆ ಗಂಭೀರ ಆರೋಪ ಮಾಡಿವೆ, ದಾಳಿ ಮಾಡಿವೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರವಾಗಿ ದೆಹಲಿ ಹೈಕೋರ್ಟ್‌ ಕೇಂದ್ರದ ನಿಲುವು ತಿಳಿಯಲು ಬಯಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ಪಿಐಎಲ್‌ ವಿಚಾರವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ), ನ್ಯೂಸ್ ಬ್ರಾಡ್‌ಕಾಸ್ಟ್‌ ಅಸೋಸಿಯೇಷನ್ (ಎನ್ಬಿಎ) ಮತ್ತು ಮಾಧ್ಯಮ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದು, ಫೆಬ್ರವರಿ 26ರ ವೇಳೆಗೆ ಎರಡು ಮನವಿಗಳ ಬಗ್ಗೆ ನಿಲುವು ತಿಳಿಸಬೇಕು ಎಂದು ಹೇಳಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಒಂದನ್ನು, ಶಿರೋಮಣಿ ಅಖಾಲಿದಳದ ರಾಜ್ಯಸಭಾ ಸದಸ್ಯ ಸುಖದೇವ್ ಸಿಂಗ್ ಧಿಂಡ್ಸಾ ಅವರು ವಕೀಲ ಬಿ.ಎಸ್. ಬಗ್ಗಾ ಮೂಲಕ ಸಲ್ಲಿಸಿದ್ದಾರೆ. ಮತ್ತೊಂದನ್ನು, ದೆಹಲಿ ನಿವಾಸಿ ಮಂಜಿತ್ ಸಿಂಗ್ ಜಿ ಕೆ ಎಂಬುವವರು ವಕೀಲ ಪರ್ಮಿಂದರ್ ಸಿಂಗ್ ಗೋಯಿಂಡಿ ಮೂಲಕ ಸಲ್ಲಿಸಿದ್ದಾರೆ. 'ಸಾರ್ವಜನಿಕರ ಭಾವನೆಗಳು ಕೆರಳಿರುವ ಸಮಯದಲ್ಲಿ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ರೂಪಿಸುವ ಪ್ರಚಾರವು, ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು. ಆ ಸಮುದಾಯದವರ ಜೀವನ, ಆಸ್ತಿ ಮತ್ತು ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ,' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

'ಮಾಧ್ಯಮಗಳು ಬಿತ್ತರಿಸಿದ ವೀಡಿಯೊಗಳಲ್ಲಿ ಹೇಳಲಾದ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ, ಕಾಲ್ಪನಿಕ ಮತ್ತು ಸತ್ಯಕ್ಕೆ ದೂರವಾದವು,' ಎಂದು ಇಬ್ಬರೂ ಅರ್ಜಿಯಲ್ಲಿ ಹೇಳಿದ್ದಾರೆ.

'ಗಣರಾಜ್ಯೋತ್ಸವ ದಿನದಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯಲ್ಲಿ ನುಸುಳಿದವು. ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರೈತರ ಮೇಲೆ ಪೊಲೀಸ್ ಅಧಿಕಾರಿಗಳು ತೀವ್ರ ಮತ್ತು ಕ್ರೂರ ದಾಳಿ ಮಾಡುವಂತೆ ಮಾಡಿದವು. ಸಮಾಜ ವಿರೋಧಿ ಶಕ್ತಿಗಳು ಅದನ್ನು ಅವಕಾಶವಾಗಿ ಬಳಸಿಕೊಂಡವು,' ಎಂದು ಆರೋಪಿಸಲಾಗಿದೆ.

'ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸ್ತಬ್ಧಚಿತ್ರಗಳನ್ನು ಪ್ರತಿಭಟನಾಕಾರರು ಧ್ವಂಸ ಮಾಡಿದರು ಎಂದು ಕೆಲ ಟಿವಿ ವಾಹಿನಿಗಳು ಆರೋಪಿಸಿದವು. ಸಿಖ್ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸಲು, ಸುದ್ದಿ ವಾಹಿನಿಗಳು ನಿರೂಪಿಸಿದ ಅಪಪ್ರಚಾರವು ಖಂಡನೀಯ. ಇದು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡಬಹುದು,' ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT