ಶನಿವಾರ, ಜೂನ್ 25, 2022
25 °C

‘ಉತ್ತರ‘ದಲ್ಲಿ ಮಳೆ ಅಬ್ಬರ: ಲಕ್ಷಾಂತರ ಜನರಿಗೆ ಸಂಕಷ್ಟ; 80 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ/ಪಟ್ನಾ/ದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅಸ್ಸಾಂ ಹಾಗೂ ಈಶಾಶ್ಯ ರಾಜ್ಯಗಳು ಮತ್ತು ಬಿಹಾರ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿಯವರೆಗೂ ‘ಉತ್ತರ‘ದಲ್ಲಿ ಮಳೆಯಿಂದ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 

ದೆಹಲಿಯಲ್ಲಿ ಭಾನುವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಸಂಚಾರಕ್ಕೆ ತೊಡಕಾಗಿದೆ. ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ. ಪ್ರತಿಕೂಲ ಹವಾಮಾನದ ಕಾರಣ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇಲ್ಲಿಯವರೆಗೂ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 

ಗಾಜಿಯಾಬಾದ್, ಹಿಂಡಾನ್ ವಾಯುನೆಲೆ, ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಮುಂದುವರಿಯಲಿದೆ ಎಂದು ಸೋಮವಾರ ಮುಂಜಾನೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಮೂರು ದಿನಗಳಿಂದ ಈಶಾನ್ಯ ರಾಜ್ಯಗಳು, ಅಸ್ಸಾಂ ಹಾಗೂ ಬಿಹಾರ ರಾಜ್ಯದಲ್ಲಿ ಭೀಕರ ಚಂಡಮಾರುತ, ಮಳೆ ಮುಂದುವರೆದಿದ್ದು ಅಪಾರ ಪ್ರಮಾಣದ ನಷ್ಟ ಸಂವಿಸಿದೆ. ಮಳೆಯಿಂದಾಗಿ ಈ ಎರಡು ರಾಜ್ಯಗಳಲ್ಲಿ 68 ಜನರು ಮೃತಪಟ್ಟಿದ್ದಾರೆ. ಇನ್ನು ತ್ರಿಪುರ, ಮಣಿಪುರ, ವಿಜೋರಾಂ ಹಾಗೂ ಕೋಲ್ಕತ್ತಾದಲ್ಲಿ 12 ಜನರು ಮಳೆಗೆ ಬಲಿಯಾಗಿದ್ದಾರೆ.  ಸುಮಾರು 10 ಲಕ್ಷ ಜನ  ತೊಂದರೆಗೆ ಒಳಗಾಗಿದ್ದಾರೆ. 

ಈ ರಾಜ್ಯಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಅಸ್ಸಾಂನಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿದ್ದಾರೆ.

ಅಸ್ಸಾಂನಲ್ಲಿ  248, ಬಿಹಾರದಲ್ಲಿ 289, ತ್ರಿಪುರ, ಮಣಿಪುರ, ವಿಜೋರಾಂನಲ್ಲಿ 78 ಪರಿಹಾರ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಅಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 3 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ ಎಂದು ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಭಾಗಗಳಲ್ಲಿ ಇನ್ನು ಎರಡು ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು