ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವ್ಯಾಪಿ ಮುಂಗಾರು ಅಬ್ಬರ

Last Updated 6 ಆಗಸ್ಟ್ 2020, 20:55 IST
ಅಕ್ಷರ ಗಾತ್ರ
ADVERTISEMENT
""
""

ದೇಶದಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಸಿಕ್ಕಿಂ ಸೇರಿದಂತೆ ಉತ್ತರ ಭಾರತದಲ್ಲಿ ಮಳೆ, ಪ್ರವಾಹದಿಂದ ನದಿಗಳು ತುಂಬಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣದ ಕೇರಳ, ಕರ್ನಾಟಕ, ತಮಿಳುನಾಡಿನಲ್ಲೂ ಮಳೆ ಸಂಬಂಧಿ ಅವಘಡಗಳು ಸಂಭವಿಸಿವೆ

ಕೇರಳ: ಅಪಾಯದ ಮಟ್ಟ ಮೀರಿದ ನದಿ

ಕೇರಳದ ಉತ್ತರ ಭಾಗದಲ್ಲಿ ಗುರುವಾರ ಭಾರಿ ಪ್ರಮಾಣದ ಮಳೆಯಾಗಿದ್ದು, ಇಡುಕ್ಕಿ, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಲಿಯಾರ್ ನದಿ ಉಕ್ಕಿ ಹರಿದಿದ್ದರಿಂದ ನಿಲಂಬೂರ್ ಪಟ್ಟಣ ಜಲಾವೃತಗೊಂಡಿತ್ತು. ಕೆಲವು ಗಂಟೆಗಳ ಬಳಿಕ ನೀರಿನ ಮಟ್ಟ ಕಡಿಮೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು, ಎರ್ನಾಕುಲಂ, ಪಾಲಕ್ಕಾಡ್ ಸೇರಿ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಿಲಂಬೂರ್‌ನಲ್ಲಿ 7 ಹಾಗೂ ಮಲಪ್ಪುರಂನಲ್ಲಿ 9 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ನೂರಾರು ಜನರು ಆಶ್ರಯ ಪಡೆದಿದ್ದಾರೆ. ವಯನಾಡ್‌ನಲ್ಲಿ 12 ಕೇಂದ್ರಗಳನ್ನು ತೆರೆಯಲಾಗಿದ್ದು, 560 ಜನರನ್ನು ಸ್ಥಳಾಂತರಿಸಲಾಗಿದೆ. ಕಂಟೇನ್ಮೆಂಟ್ ವಲಯದ ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶದ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 16 ಜಿಲ್ಲೆಗಳ 536 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಶಾರದಾ, ಸರಯೂ, ರಪ್ತಿ ನದಿಗಳು ತುಂಬಿ ಹರಿಯುತ್ತಿವೆ. ಮೌ ಜಿಲ್ಲೆಯಲ್ಲಿ ದೋಣಿಯಲ್ಲಿ ಸರಯೂ ನದಿ ದಾಟುತ್ತಿದ್ದ ಮೂವರು ಮಕ್ಕಳು ಸೇರಿ ಐದು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಪಶ್ಚಿಮ ಬಂಗಾಳ

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ದಕ್ಷಿಣ ಭಾಗದಲ್ಲಿ ಮಳೆ ಮುಂದುವರಿದಿತ್ತು. ಬಂಗಾಳ ಕೊಲ್ಲಿಯ ವಾಯುವ್ಯ ಭಾಗ, ಪಕ್ಕದ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಯಲ್ಲೂ ವ್ಯಾಪಕ ಮಳೆ ಆಗಿದೆ. ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಹೌರಾ, ಹೂಗ್ಲಿ, ಪೂರ್ವ ಬರ್ದ್ವಾನ್ ಜಿಲ್ಲೆಗಳಲ್ಲಿ ಸಾಧಾರಣದಿಂದ ಅಧಿಕ ಮಳೆ ಸುರಿದಿದೆ. ಬಿರ್‌ಭುಮ್, ಬಂಕುರಾ, ಪುರುಲಿಯಾ ಜಿಲ್ಲೆಗಳಲ್ಲಿ 9 ಸೆಂ. ಮೀ. ಮಳೆ ಆಗಿದೆ.

ಒಡಿಶಾ

ಒಡಿಶಾ ರಾಜ್ಯದ ಬಹುತೇಕ ಕಡೆಗಳಲ್ಲಿ ಗುರುವಾರ ಮಳೆ ಇತ್ತು. ಭುವನೇಶ್ವರದಲ್ಲಿ 24 ಗಂಟೆಗಳಲ್ಲಿ 14.94 ಸೆಂಟಿ ಮೀಟರ್ ಮಳೆ ಸುರಿದಿದೆ. ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. ಸಂಭಾಲ್‌ಪುರ, ದೋಗ್ರಾ, ಸುಂದರಗಡ ಸೇರಿದಂತೆ ಹಲವು ಕಡೆಗಳಲ್ಲಿ ಅತಿಹೆಚ್ಚು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಕೊಯಮತ್ತೂರಿನ ಕೆಲ ಪ್ರದೇಶ, ಕೇರಳ ಗಡಿ ಭಾಗದಲ್ಲಿ ಕೆಲವು ದಿನಗಳಿಂದ ಆಗುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೆಟ್ಟುಪಾಳ್ಯಂನ ಪಿಲ್ಲೂರ್ ಅಣೆಕಟ್ಟೆಯಿಂದ ಭವಾನಿ ನದಿಗೆ ನೀರು ಹರಿಸಲಾಗುತ್ತಿದೆ.

ಮುಂಬೈನ ಪೆದ್ದಾರ್‌ ರಸ್ತೆಯಲ್ಲಿ ಭೂಕುಸಿತದಿಂದಾಗಿ ಸಂಚಾರ ಸ್ಥಗಿತಗೊಂಡಿದೆ

‘ಮಹಾ’ ಮಳೆ

ಮುಂಬೈ ಮಹಾನಗರದ ಕೆಲ ಭಾಗ, ಪಾಲ್ಘಾರ್, ಪುಣೆ, ಸತಾರಾ ಹಾಗೂ ಕೊಲ್ಲಾಪುರ ಜಿಲ್ಲೆಗಳಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದೆ. ಎರಡು ದಿನಗಳಿಂದ ಭಾರಿ ಮಳೆಗೆ ಸಾಕ್ಷಿಯಾಗಿದ್ದ ಮುಂಬೈ ನಗರ ಗುರುವಾರ ಸಹಜ ಸ್ಥಿತಿಗೆ ಮರಳಿದೆ. ಆದರೆ ದಕ್ಷಿಣ ಭಾಗದ ವಡಾಲ, ನಾಯರ್ ಆಸ್ಪತ್ರೆ, ಬಿಪಿಟಿ ಕಾಲೊನಿ ಸೇರಿದಂತೆ ಹಲವೆಡೆ ರಸ್ತೆಗಳು ಇನ್ನೂ ಜಲಾವೃತವಾಗಿಯೇ ಇವೆ. ಕೊಲಾಬಾ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಬಂದಿದ್ದು, ಸಾರಿಗೆ ವ್ಯವಸ್ಥೆ ಗುರುವಾರದಿಂದ ಶುರುವಾಗಿವೆ. ಮುಂಬೈ ಹಾಗೂ ಉಪನಗರಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

* ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ 22 ಜನರನ್ನು ಪಾಲ್ಘಾರ್ ಪೊಲೀಸರು ರಕ್ಷಿಸಿದ್ದಾರೆ. ಪ್ರವಾಹದಿಂದ ನಾಲ್ಕು ಗಂಟೆಗಳ ಕಾಲ ಮರವೇರಿ ಕುಳಿತಿದ್ದ ಐದು ವರ್ಷದ ಬಾಲಕಿಯನ್ನೂ ಸುರಕ್ಷಿತವಾಗಿ ಮನೆ ತಲುಪಿಸಲಾಗಿದೆ. ಪಾಲ್ಘಾರ್ ಪೊಲೀಸರ ಕರ್ತವ್ಯವನ್ನು ಗೃಹಸಚಿವ ಅನಿಲ್ ದೇಶ್‌ಮುಖ್ ಶ್ಲಾಘಿಸಿದ್ದಾರೆ

* ಕೊಲ್ಲಾಪುರದ ಪಂಚಗಂಗಾ ನದಿಯು ಗುರುವಾರ ಮುಂಜಾನೆ ಅಪಾಯದ ಮಟ್ಟವನ್ನು ಮೀರಿದೆ. ನೀರಿನ ಮಟ್ಟ 41.7 ಅಡಿಗೆ ತಲುಪಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಗ್ಗು ಪ್ರದೇಶದ ಜನರಿಗೆ ಜಿಲ್ಲಾಡಳಿತ ಸೂಚಿಸಿದೆ. ಎನ್‌ಡಿಆರ್‌ಎಫ್‌ನ 4 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಪಕ್ಕದ ಸಾಂಗ್ಲಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಕೃಷ್ಣಾ, ಕೊಯ್ನಾ ನದಿಪಾತ್ರದ ಜನರಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ

* ಹಳಿಗಳು ಜಲಾವೃತಗೊಂಡು ತೊಂದರೆಗೆ ಸಿಲುಕಿದ್ದ ಎರಡು ರೈಲುಗಳಲ್ಲಿ ಇದ್ದ 290 ಜನರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT