ಚೆನ್ನೈ: ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

ಚೆನ್ನೈ: ಚೆನ್ನೈ ಮತ್ತು ಹೊರವಲಯದದಲ್ಲಿ ಕಳೆದ ರಾತ್ರಿಯಿಂದಲೂ ಧಾರಾಕಾರ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ನಗರ ಪರಿಮಿತಿಯಲ್ಲಿರುವ ಮೂರು ಜಲಾಶಯಗಳಿಗೆ ನೀರು ಹೊರಬಿಡಲಿದ್ದು, ನಾಗರಿಕರಿಗೆ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ನೀರು ನುಗ್ಗಿರುವ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದರು. ಅಲ್ಲದೆ, ತಗ್ಗು ಪ್ರದೇಶಗಳಲ್ಲಿ ಇರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಮತ್ತು ನೀರು ತೆರವುಗೊಳಿಸಲು ಸೂಕ್ತ ಕ್ರಮವಹಿಸುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದರು.
ಅಲ್ಲದೆ, ಸಚಿವ ಸಹೋದ್ಯೋಗಿಗಳ ಜೊತೆಗೂಡಿ ಸಂತ್ರಸ್ತರಿಗೆ ಆಹಾರ, ಹಾಲು, ಹೊದಿಗೆ ವಿತರಿಸಿದರು. ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್ ಅವರ ಪ್ರಕಾರ, ಚೆನ್ನೈ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ 10 ರಿಂದ 23 ಸೆಂಟಿ ಮೀಟರ್‌ನಷ್ಟು ಮಳೆ ಸುರಿದಿರುವುದು ದಾಖಲಾಗಿದೆ.
ತಮಿಳುನಾಡು ಸಚಿವಾಲಯದ ಬಳಿ ಇರುವ ಮಾಪನದಲ್ಲಿ ಒಟ್ಟು 23 ಸೆಂ.ಮೀ ಮಳೆ ಸುರಿದಿರುವುದು ದಾಖಲಾಗಿದೆ. ಮಳೆ ಕಾರಣ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಪೂಂಡಿ, ಚೆಂಬರಂಬಕ್ಕಂ ಮತ್ತು ಫುಜಲ್ ಜಲಾಶಯಗಳಿಂದ ನೀರು ಹೊರಬಿಡಲು ಸಿದ್ಧತೆ ನಡೆದಿದೆ. ಈ ಜಲಾಶಯಗಳು ಚೆನ್ನೈ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ.
ಸಂತ್ರಸ್ತರಿಗೆ ನೆರವಾಗಲು ರಾಷ್ಟ್ರೀಯ ವಿಕೋಪ ರಕ್ಷಣಾ ಪಡೆಯ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿದೆ. ಇವುಗಳ ಪೈಕಿ ಚೆಂಗಲ್‌ಪೇಟ್ ಮತ್ತು ತಿರುವಳ್ಳುರ್‌ಗೆ ತಲಾ ಒಂದು, ಎರಡು ತಂಡಗಳನ್ನು ಮಧುರೈನಲ್ಲಿ ನಿಯೋಜಿಸಲಾಗಿದೆ.
ನಗರ ಭಾಗದಲ್ಲಿ ಸೈದಾಪೇಟ್, ವೆಲಾಚೆರಿ, ಅದಂಬಕ್ಕಂ, ಮಡಿಪಕ್ಕಂ ಭಾಗದಲ್ಲಿ ನೀರು ಎರಡರಿಂದ ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
2015ರಲ್ಲಿಯೂ ಚೆನ್ನೈನಲ್ಲಿ ಭಾರಿಮಳೆಯಾಗಿದ್ದು, ದುಃಸ್ವಪ್ನವಾಗಿ ಕಾಡಿತ್ತು. ಆಗ ಚೆಂಬರಂಬಕ್ಕಂ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.