ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಕೇರಳ: ಆನೆ ದಾಳಿ ರಕ್ಷಣೆಗಾಗಿ ತಡೆಗೋಡೆ; 18 ತಿಂಗಳು ಕಾಲಾವಕಾಶ ನೀಡಿದ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ‘ಬುಡಕಟ್ಟು ಕುಟುಂಬಗಳಿಗೆ ಆನೆ ದಾಳಿಯಿಂದ ರಕ್ಷಣೆ ಒದಗಿಸಲು ಕಟ್ಟಲಾಗುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು 18 ತಿಂಗಳುಗಳೊಳಗೆ ಪೂರ್ಣಗೊಳಿಸಬೇಕು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕಣ್ಣೂರು ಜಿಲ್ಲೆಯಲ್ಲಿರುವ ಆರಳಂ ಕೃಷಿ ಫಾರ್ಮ್‌ನ 3,500 ಎಕರೆಯಲ್ಲಿ 1,515 ಬುಡಕಟ್ಟು ಕುಟುಂಬಗಳು ವಾಸವಾಗಿವೆ. ಇಲ್ಲಿ ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಆನೆಗಳ ದಾಳಿಯೂ ಹೆಚ್ಚಿದೆ. ಇದರಿಂದ ರಕ್ಷಣೆ ಒದಗಿಸಲು ತಡೆಗೋಡೆ ನಿರ್ಮಿಸಲಾಗುತ್ತಿದೆ.

‘ಈಗಾಗಲೇ 3.5 ಕಿ.ಮೀ ಉದ್ದಕ್ಕೆ ಬೇಲಿ ಹಾಕಲಾಗಿದೆ. ಇದನ್ನು ಹೊರತುಪಡಿಸಿ 10.5 ಕಿ.ಮೀ ಎತ್ತರದ ಕಾಂಕ್ರೀಟ್‌ ಗೋಡೆ ನಿರ್ಮಾಣಕ್ಕಾಗಿ ₹22 ಕೋಟಿ ಮಂಜೂರು ಮಾಡಲಾಗಿದೆ. ಸಂಪೂರ್ಣ ಯೋಜನಾ ಅಧ್ಯಯನವನ್ನೂ ಕೈಗೊಳ್ಳಲಾಗಿದೆ. ಹಾಗಾಗಿ ಈ ಕೃಷಿ ಫಾರ್ಮ್‌ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು 36 ತಿಂಗಳ ಸಮಯವಕಾಶ ನೀಡಬೇಕು’ ಎಂದು ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. 

‘ಪ್ರಾರಂಭದಲ್ಲಿ ಈ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಎಸ್‌ಸಿ/ಎಸ್‌ಟಿ ಇಲಾಖೆಗೆ ನೀಡಲಾಗಿತ್ತು. ಇಲಾಖೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದರೆ ಇದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಬಹಳ ಹಿಂದೆಯೇ ಕೈಗೊಳ್ಳಲಾಗಿತ್ತು. ಹಾಗಾಗಿ ಆ ಪ್ರದೇಶದಲ್ಲಿರುವ ಜನರ ಮತ್ತು ಅವರ ಆಸ್ತಿ ರಕ್ಷಣೆಗಾಗಿ ಯಾವುದೇ ವಿಳಂಬ ಮಾಡದೇ ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ನ್ಯಾಯಾಲಯವು ನಿರ್ದೇಶಿಸಿದೆ.

ಇದೇ ಮೊದಲ ಬಾರಿ ಲೋಕೋಪಯೋಗಿ ಇಲಾಖೆಯು ಈ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಿದೆ. ಹಾಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು 18 ತಿಂಗಳುಗಳು ಸಮಯಾವಕಾಶ ನೀಡಲು ಮಾತ್ರ ಸಾಧ್ಯ’ ಎಂದು ನ್ಯಾಯಾಲಯವು ತಿಳಿಸಿದೆ.

‘ಸರಿಯಾದ ಮೇಲ್ವಿಚಾರಣೆ ಇಲ್ಲದಿದ್ದರೆ ಈ ಕೆಲಸವು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ಈ ಬಗ್ಗೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಅಲ್ಲದೆ ಕಾಮಗಾರಿಯ ಮೇಲುಸ್ತುವಾರಿಯನ್ನು ವಹಿಸಬೇಕು’ ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು