ಗುರುವಾರ , ಏಪ್ರಿಲ್ 15, 2021
24 °C

ಪರಿಸರ ಇಲಾಖೆ ಒಪ್ಪಿಗೆ ತಪ್ಪಿಸಲು ಹೆದ್ದಾರಿ ಯೋಜನೆ ವಿಭಜನೆ ಸಲ್ಲ: ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪರಿಸರಕ್ಕೆ ಸಂಬಂಧಿಸಿದ ಒಪ್ಪಿಗೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು 100 ಕಿ.ಮೀ.ಗಿಂತ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ವಿಭಜಿಸಬಾರದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಯೋಜನೆ ಅನುಷ್ಠಾನಕ್ಕೆ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ. ಆದರೆ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ನೀಡಿ, 100 ಕಿ.ಮೀ.ಗಿಂತ ಹೆಚ್ಚು ಉದ್ದದ ಹೆದ್ದಾರಿ ಯೋಜನೆಗಳನ್ನು ವಿಭಜಿಸುವುದನ್ನು ಸಮರ್ಥಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌, ಹೇಮಂತ್‌ ಗುಪ್ತಾ ಹಾಗೂ ಅಜಯ್‌ ರಸ್ತೋಗಿ ಅವರಿರುವ ನ್ಯಾಯಪೀಠ, ಎನ್‌ಎಚ್‌–45ಎ ವಿಸ್ತರಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

100 ಕಿ.ಮೀ. ಗಿಂತಲೂ ಅಧಿಕ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ವಿಭಜನೆಗೆ ಅನುಮತಿ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಸಲುವಾಗಿ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿತು.

ಎನ್‌ಎಚ್‌–45ಎ ವಿಸ್ತರಣೆಗೆ ತಡೆ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ನ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿತು.

ಎನ್‌ಎಚ್‌–45ಎ ವಿಸ್ತರಣೆಗೆ ಈಗಿರುವ ಹೆದ್ದಾರಿಯ ಎರಡೂ ಪಕ್ಕದಲ್ಲಿ 40 ಮೀಟರ್‌ಗಿಂತ ಹೆಚ್ಚು ಭೂ ಸ್ವಾಧೀನಪಡಿಸಿಕೊಳ್ಳುವ ಅಗತ್ಯ ಇಲ್ಲ. ಹೀಗಾಗಿ ಈ ಯೋಜನೆಗೆ ಪರಿಸರ ಇಲಾಖೆ ಇಪ್ಪಿಗೆಯ ಅಗತ್ಯವೂ ಇಲ್ಲ ಎಂದು ನ್ಯಾಯಪೀಠ ಹೇಳಿತು.

ಯೋಜನೆ ಅನುಷ್ಠಾನದ ವೇಳೆ, ಪ್ರಸ್ತುತ ಜಾರಿಯಲ್ಲಿರುವ ಕಾನೂನಿನನ್ವಯ ಮರು ಅರಣ್ಯೀಕರಣವನ್ನು ಪೂರ್ಣಗೊಳಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನ್ಯಾಯಪೀಠ ಸೂಚನೆಯನ್ನೂ ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು