ಗುರುವಾರ , ಮೇ 19, 2022
24 °C

ವಿಧಾನಸಭೆ ದ್ವಾರದಲ್ಲಿ ಖಾಲಿಸ್ತಾನಿ ಧ್ವಜ: ಅಂತರರಾಜ್ಯ ಗಡಿ ಬಂದ್ ಮಾಡಿದ ಹಿಮಾಚಲ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಧರ್ಮಶಾಲಾ (ಹಿಮಾಚಲ ಪ್ರದೇಶ): ರಾಜ್ಯ ವಿಧಾನಸಭೆಯ ಆವರಣದ ಮುಖ್ಯದ್ವಾರದ ಹೊರ ಭಾಗದಲ್ಲಿ ಖಾಲಿಸ್ತಾನಿ ಧ್ವಜಗಳನ್ನು ಕಟ್ಟಿದ್ದ ಬೆನ್ನಲ್ಲೇ ಅಂತರರಾಜ್ಯ ಗಡಿಗಳನ್ನು ಹಿಮಾಚಲ ಪ್ರದೇಶ ಬಂದ್ ಮಾಡಿದೆ. ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಸಂಘಟನೆ ‘ಸಿಖ್ ಫಾರ್ ಜಸ್ಟೀನ್‌ (ಎಸ್‌ಎಫ್‌ಜೆ)’ ಪ್ರಧಾನ ಕಾನೂನು ಸಲಹೆಗಾರ ಗುರುಪತ್ವಂತ್ ಸಿಂಗ್‌ ಪನ್ನು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಮತ್ತು ಅಂತರರಾಜ್ಯ ಗಡಿಗಳಲ್ಲಿ ಸೂಕ್ಷ್ಮ ನಿಗಾ ವಹಿಸುವಂತೆ ಡಿಜಿಪಿ ಸೂಚಿಸಿದ್ದಾರೆ. ಈ ವಿಚಾರವಾಗಿ ಎಡಿಜಿಪಿ (ಸಿಐಡಿ), ಐಜಿ, ಡಿಐಜಿ ಹಾಗೂ ಜಿಲ್ಲಾ ಎಸ್‌ಪಿಗಳಿಗೆ ನಿರ್ದೇಶನ ನೀಡಲಾಗಿದೆ.

ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಹೊರಭಾಗದಲ್ಲಿ ಭಾನುವಾರ ಖಾಲಿಸ್ತಾನಿ ಧ್ವಜಗಳನ್ನು ಕಟ್ಟಿರುವುದು ಹಾಗೂ ಖಾಲಿಸ್ತಾನಿ ಪರ ಘೊಷಣೆಗಳನ್ನು ಬರೆದಿರುವುದು ಪತ್ತೆಯಾಗಿತ್ತು. ಧ್ವಜಗಳನ್ನು ತೆಗೆದು, ಬರಹವನ್ನು ಅಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್‌ ಅವರು ಘಟನೆಯನ್ನು ಖಂಡಿಸಿದ್ದಲ್ಲದೆ, ‘ಇದು ಹೇಡಿತನದ ಕೃತ್ಯ. ತಪ್ಪಿತಸ್ಥರನ್ನು ಆದಷ್ಟು ಬೇಗ ಸೆರೆಹಿಡಿಯಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು