ಹಿಮಾಚಲ ಪ್ರದೇಶ: ಪಕ್ಷ ವಿರೋಧಿ ಚಟುವಟಿಕೆ, ಕಾಂಗ್ರೆಸ್‌ನ 30 ನಾಯಕರ ಉಚ್ಛಾಟನೆ

ಶಿಮ್ಲಾ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೆ ಒಂದು ದಿನ ಬಾಕಿ ಇರುವಾಗಲೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 30 ಮಂದಿ ನಾಯಕರನ್ನು ಅಮಾನತು ಮಾಡಲಾಗಿದೆ.
ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಮಿತಿ (ಎಚ್‌ಪಿಸಿಸಿ) ಅಧ್ಯಕ್ಷ ಅಮಿತ್ ಪಾಲ್ ಸಿಂಗ್ ಆದೇಶ ಹೊರಡಿಸಿದ್ದಾರೆ.
Himachal Pradesh Congress President expelled 30 party leaders from the primary membership of the party for the next six years for anti-party activities pic.twitter.com/BwC35MD9gT
— ANI (@ANI) December 7, 2022
ನಾಳೆ ಫಲಿತಾಂಶ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿ.8ರಂದು (ಗುರುವಾರ) ಪ್ರಕಟವಾಗಲಿದೆ.
68 ಕ್ಷೇತ್ರಗಳ ಹಿಮಾಚಲ ಪ್ರದೇಶ ವಿಧಾನಸಭೆಗೆ ನ.12ರಂದು ಮತದಾನ ನಡೆದಿತ್ತು. ಮುಖ್ಯಮಂತ್ರಿ ಜೈರಾಮ್ ಠಾಕೂರ್, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಮಗ ವಿಕ್ರಮಾದಿತ್ಯ ಸಿಂಗ್ ಸೇರಿ 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 55 ಲಕ್ಷಕ್ಕೂ ಹೆಚ್ಚು ಮತದಾರರು ಇವರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.
ಅಭಿವೃದ್ಧಿ ಮಂತ್ರವನ್ನೇ ಪ್ರಮುಖ ಕಾರ್ಯಸೂಚಿ ಮಾಡಿಕೊಂಡು ಮತ ಯಾಚಿಸಿದ್ದ ಬಿಜೆಪಿಯು ರಾಜ್ಯದಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸುವ ಕಡೆ ದೃಷ್ಟಿ ನೆಟ್ಟಿದೆ. ಆಡಳಿತಾರೂಢ ಪಕ್ಷಕ್ಕೆ ಎರಡನೇ ಬಾರಿ ಅಧಿಕಾರ ನೀಡಿರುವ ಉದಾಹರಣೆಯು ನಾಲ್ಕು ದಶಕದಿಂದ ಈಚೆಗೆ ರಾಜ್ಯದಲ್ಲಿ ಇಲ್ಲ. ಈ ಇತಿಹಾಸವನ್ನು ಮುಂದುವರಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್ ಮತದಾರರಲ್ಲಿ ಮನವಿ ಮಾಡಿದೆ.
ಬಿಜೆಪಿ ಮುಷ್ಟಿಯಿಂದ ರಾಜ್ಯವನ್ನು ಪಡೆದುಕೊಳ್ಳುವುದು ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.
24 ವರ್ಷಗಳ ಬಳಿಕ ಗಾಂಧಿ ಕುಟುಂಬದವರಲ್ಲದ ನಾಯಕನನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ ಮತ್ತು ಚುನಾವಣಾ ಕಣದಿಂದ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ ಸಂಪೂರ್ಣವಾಗಿ ಹೊರಗಿದ್ದದ್ದೂ ಈ ಚುನಾವಣೆಯ ಪ್ರಮುಖ ಅಂಶಗಳಲ್ಲಿ ಒಂದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.