ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನಕ್ಕೆ ಪೂರಕವಾಗಿ ಜನರ ಕೌಶಲ ವೃದ್ಧಿಗೆ ಒತ್ತು ನೀಡಿ: ಪ್ರಧಾನಿ ಮೋದಿ

Last Updated 15 ಜುಲೈ 2021, 7:41 IST
ಅಕ್ಷರ ಗಾತ್ರ

ನವದೆಹಲಿ: ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಪೂರಕವಾಗಿ ಜನರ ಕೌಶಲ, ಕೌಶಲ ವೃದ್ಧಿ, ಮರು ಕೌಶಲಕ್ಕೆ ಒತ್ತು ನೀಡಬೇಕಾದ ಅಗತ್ಯ ಇದೆ. ಹೆಚ್ಚು ಬೇಡಿಕೆ ಇರುವ ಕಾರಣ ಇದು ತ್ವರಿತವಾಗಿ ಆಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಹೊಸ ಪೀಳಿಗೆಯ ಕೌಶಲ ಅಭಿವೃದ್ದಿಯು ರಾಷ್ಟ್ರೀಯ ಅಗತ್ಯವಾಗಿದ್ದು, ಅದು ಆತ್ಮನಿರ್ಭರ ಭಾರತದ ಅಡಿಪಾಯವೂ ಆಗಿದೆ ಎಂದು ಅವರು ಪ್ರತಿಪಾದಿಸಿದರು.

ವಿಶ್ವ ಯವ ಕೌಶಲ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸ್ಕಿಲ್‌ ಇಂಡಿಯಾ ಮಿಷನ್‌’ಗೆ ಇನ್ನಷ್ಟು ವೇಗ ನೀಡುವಂತೆ ಕರೆ ನೀಡಿದರು.

‘ಗಳಿಕೆ ಆರಂಭವಾಗುತ್ತಿದ್ದಂತೆ ಕಲಿಕೆ ನಿಲ್ಲಬಾರದು. ಇಂದಿನ ಜಗತ್ತಿನಲ್ಲಿ ಕೌಶಲ ಹೊಂದಿದವರು ಬೆಳೆಯುತ್ತಾರೆ. ಜನರಿಗೂ ಮತ್ತು ದೇಶಗಳಿಗೂ ಅದು ಅನ್ವಯ’ ಎಂದ ಪ್ರಧಾನಿ, ಸಂಬಂಧಿಸಿದವರು ಜನರ ಕೌಶಲ, ಕೌಶಲ ವೃದ್ಧಿ ಮತ್ತು ಮರು ಕೌಶಲಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಮರು ಕೌಶಲಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಹಾಗಾಗಿ ಅದಕ್ಕೆ ಪೂರಕವಾಗಿ, ತ್ವರಿತವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದರು.

ಭಾರತವು ಚತುರ ಮತ್ತು ನುರಿತ ಮಾನವ ಸಂಪನ್ಮೂಲವನ್ನು ಜಗತ್ತಿಗೆ ಒದಗಿಸುತ್ತಿದೆ. ಹೀಗಾಗಿ ದೇಶದ ಯುವ ಜನರನ್ನು ಈ ನಿಟ್ಟಿನಲ್ಲಿ ಕೌಶಲಗೊಳಿಸುವುದು ನಮ್ಮ ಕಾರ್ಯತಂತ್ರದ ತಿರುಳಾಗಿರಬೇಕು ಎಂದು ಅವರು ಸೂಚಿಸಿದರು.

ದೇಶದ 1.25 ಕೋಟಿಗೂ ಹೆಚ್ಚು ಯುವ ಜನರಿಗೆ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅಡಿ ತರಬೇತಿ ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಕೋವಿಡ್‌ ಪಿಡುಗಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ದೇಶದ ಈ ನುರಿತ ಕಾರ್ಯಪಡೆ ನೆರವು ನೀಡಿದೆ ಎಂದರು.

‘ಗೋಯಿಂಗ್‌ ಆನ್‌ಲೈನ್‌ ಆ್ಯಸ್‌ ಲೀಡರ್ಸ್‌’ (ಜಿಒಎಎಲ್‌) ಕುರಿತು ಮಾತನಾಡಿದ ಪ್ರಧಾನಿ ಅವರು, ಇದು ದೇಶದ ಬುಡಕಟ್ಟು ಜನರಿಗೂ ನೆರವಾಗುತ್ತಿದೆ. ಈ ರೀತಿಯ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಕೌಶಲದ ಮೂಲಕ ತಮ್ಮನ್ನು ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿಸಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT