ಶುಕ್ರವಾರ, ಜನವರಿ 27, 2023
26 °C

ಭಾರತೀಯನಾಗಿ ನಾಚಿಕೆಯಾಗಿದೆ: ಕಾಶ್ಮೀರಿ ಪಂಡಿತರ ಹತ್ಯೆಗೆ ಕೇರಳ ರಾಜ್ಯಪಾಲ ಬೇಸರ

ಪಿಟಿಐ Updated:

ಅಕ್ಷರ ಗಾತ್ರ : | |

ಬುಲಂದ್‌ಶೆಹರ್‌: ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಅಮಾಯಕರ ಹತ್ಯೆಗಿಂತ ಘೋರ ಅಪರಾಧ ಇನ್ನೊಂದಿಲ್ಲ, ಭಾರತೀಯನಾಗಿ ನಾನು ನಾಚಿಕೆಪಡುತ್ತೇನೆ ಎಂದಿದ್ದಾರೆ.

ಉತ್ತರ ಪ್ರದೇಶದ ಬಂಗಾರ್ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಲು ಖಾನ್ ಆಗಮಿಸಿದ್ದರು.

ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದ ಅವರು, ‘ಕೊಲೆ, ಅಮಾಯಕರ ಹತ್ಯೆಗಿಂತ ದೊಡ್ಡ ಅಪರಾಧ ಬೇರೊಂದಿಲ್ಲ. ಭಾರತೀಯನಾಗಿ ನನಗೆ ನಾಚಿಕೆಯಾಗುತ್ತಿದೆ’ ಎಂದರು.

‘ನನ್ನ ದೇಶದ ಯಾವುದೇ ವ್ಯಕ್ತಿ ತನ್ನ ಮನೆ ತೊರೆಯಬೇಕಾಗಿ ಬಂದು, ನಿರಾಶ್ರಿತನಾದರೆ ಎಷ್ಟು ಅವಮಾನವಾದರೂ ಸಾಲದು’ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಆಡಳಿತವು ಕಾಶ್ಮೀರಿ ಪಂಡಿತ ಸಮುದಾಯದ ರಕ್ಷಣೆಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದೂ ಖಾನ್ ಇದೇ ವೇಳೆ ಹೇಳಿದರು.

ಹತ್ಯೆಯ ಕುರಿತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ಅವರು ರಾಜಕೀಯ ಮಾತನಾಡುವಾಗ ತಮ್ಮ ಹುದ್ದೆಯ ಘನತೆಯನ್ನು ಗಮನದಲ್ಲಿಟ್ಟುಕೊಳ್ಳುವುದಿಲ್ಲ’ ಎಂದು ಹೇಳಿದರು.

ಶನಿವಾರ ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಪುರನ್ ಕ್ರಿಶನ್ ಭಟ್ ಅವರನ್ನು ಉಗ್ರಗಾಮಿಗಳು ಕೊಂದ ನಂತರ, ಅಬ್ದುಲ್ಲಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ಇದು ನಿಲ್ಲುವುದಿಲ್ಲ, ನ್ಯಾಯ ಸಿಗುವವರೆಗೂ ಮುಂದುವರಿಯುತ್ತದೆ’ ಎಂದು ಹೇಳಿದ್ದರು.

ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರು ತಂದ ಕಾನೂನುಗಳಿಂದ ದೇಶದ ಮಹಿಳೆಯರ ಪರಿಸ್ಥಿತಿ ಬದಲಾಗಿದೆ ಎಂಬ ಅಂಶದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿಲ್ಲ ಎಂದು ಕೇರಳ ರಾಜ್ಯಪಾಲ ಹೇಳಿದರು.

ದೇಶದಲ್ಲಿ ಮಹಿಳೆಯರ ಹದಗೆಡುತ್ತಿರುವ ಸ್ಥಿತಿಯ ಕುರಿತು ಕೇಳಿದ ಪ್ರಶ್ನೆಗೆ, ‘ ಮಹಿಳೆಯರ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಕರೆಯುವುದು ಸರಿಯಲ್ಲ’ ಎಂದು ಹೇಳಿದರು.

ಮಹಿಳೆಯರಲ್ಲಿ ಜಾಗೃತಿ ಹೆಚ್ಚಿದೆ. ಈ ಹಿಂದೆ, 12-13 ವರ್ಷ ವಯಸ್ಸಿನ ಹುಡುಗಿ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಹಳ್ಳಿಗಳ ಹುಡುಗಿಯರು ಶಿಕ್ಷಣ ಪಡೆಯಲು ಏಳು ಕಿಲೋಮೀಟರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಾರೆ ಎಂದು ಖಾನ್ ಹೇಳಿದರು. ಇವರು 12-13 ವರ್ಷ ವಯಸ್ಸಿನ ನಂತರ, ತಮ್ಮ ತಾಯಿ ಮತ್ತು ಹಿರಿಯ ಸಹೋದರಿಯರಿಲ್ಲದೇ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಿಲ್ಲದಂಥ ಸಮುದಾಯಗಳಿಂದ ಬಂದಂಥವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು