ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 2, 3ರಂದು ದಕ್ಷಿಣ ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Last Updated 1 ಡಿಸೆಂಬರ್ 2020, 10:49 IST
ಅಕ್ಷರ ಗಾತ್ರ

ನವದೆಹಲಿ:ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪ್ರಬಲಗೊಳ್ಳುತ್ತಿದ್ದು, ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಗಾಳಿಯ ವೇಗವು ಪ್ರತಿಗಂಟೆಗೆ 80 ಕಿಮೀ ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಚಂಡಮಾರುತವನ್ನು ‘ಬುರೇವಿ’ ಎಂದು ಹೆಸರಿಸಲಾಗಿದೆ. ಸದ್ಯ ಈ ಚಂಡಮಾರುತವು ಕನ್ಯಾಕುಮಾರಿಯ ಆಗ್ನೇಯಕ್ಕೆ ಸುಮಾರು 930 ಕಿಮೀ ದೂರದಲ್ಲಿ ಬೀಸುತ್ತಿದ್ದು, ಪ್ರಸ್ತುತ ಇರುವ ಪಥದಲ್ಲಿಯೇ ಮುಂದುವರಿದರೆ ನಾಳೆ (ಡಿಸೆಂಬರ್‌ 2) ಸಂಜೆ ಅಥವಾ ರಾತ್ರಿ ವೇಳೆಗೆ ಶ್ರೀಲಂಕಾ ಕರಾವಳಿಯನ್ನು ತಲುಪುವ ಸಾಧ್ಯತೆ ಇದೆ. ಬಳಿಕ ಪಶ್ಚಿಮದತ್ತ ತಿರುಗಲಿದ್ದು, ಮರುದಿನ ಬೆಳಿಗ್ಗೆ ಭಾರತದ ಕರಾವಳಿಯನ್ನು ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನವೆಂಬರ್‌ 25ರಂದು ಪುದುಚೇರಿ, ಕಾರೈಕಲ್‌ನಲ್ಲಿ ಭೂಕುಸಿತಕ್ಕೆ ಕಾರಣವಾಗಿದ್ದ ‘ನಿವಾರ್‌’ ಚಂಡಮಾರುತದ ಬಳಿಕ ‘ಬುರೇವಿ’ ಭೀತಿ ಸೃಷ್ಟಿಸಿದೆ. 2020ರಲ್ಲಿ ಭಾರತದ ಕರಾವಳಿಗೆ ಅಪ್ಪಳಿಸಲಿರುವ ನಾಲ್ಕನೇ ಚಂಡಮಾರುತ ಇದಾಗಲಿದೆ. ಅತಿವೇಗದ ಚಂಡಮಾರುತ (ಸೂಪರ್‌ ಸೈಕ್ಲೋನ್‌) ‘ಅಂಪನ್‌’ ಮೇ ತಿಂಗಳಿನಲ್ಲಿ ಹಾಗೂ ಜೂನ್‌ನಲ್ಲಿ ‘ನಿಸರ್ಗ’ ಹಾನಿ ಮಾಡಿದ್ದವು.

‘ಬುರೇವಿ’ ಸಮೀಪಿಸುತ್ತಿರುವುದರಿಂದ ಡಿಸೆಂಬರ್ 2ರಂದು ಭಾರತದ ಕರಾವಳಿಯಲ್ಲಿ ಗಾಳಿಯು ಪ್ರತಿಗಂಟೆಗೆ 65 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಡಿ.3ರಂದು ತಮಿಳುನಾಡು ಮತ್ತು ಕೇರಳದ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಶುಕ್ರವಾರದ ವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT