ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್| ಪ್ರತಿ 10ಲಕ್ಷಕ್ಕೆ ವಿಶ್ವದಲ್ಲೇ ಭಾರತದಲ್ಲಿ ಕಡಿಮೆ ಪ್ರಕರಣ

ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ: ಕೇಂದ್ರ ಆರೋಗ್ಯ ಸಚಿವಾಲಯ
Last Updated 1 ನವೆಂಬರ್ 2020, 18:21 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಪ್ರತಿ ಹತ್ತು ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕಿಗೀಡಾಗುವ ಪ್ರಕರಣಗಳಿಗೆ ಹೋಲಿಸಿದರೆ, ವಿಶ್ವದಲ್ಲೇ ಭಾರತದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ.

ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನವೂ 6 ಲಕ್ಷಕ್ಕಿಂತಲೂ ಕಡಿಮೆ ಇದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಸತತ ಕುಸಿತವಾಗುತ್ತಿದ್ದು, ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ವಿಶ್ವದಲ್ಲಿಯೇ ಅತಿ ಕಡಿಮೆ ಪ್ರಕರಣಗಳು ಭಾರತದಲ್ಲಿ ವರದಿಯಾಗುತ್ತಿವೆ. ದೇಶದಲ್ಲಿ ಪ್ರತಿ ಹತ್ತು ಲಕ್ಷಕ್ಕೆ 5,930 ಪ್ರಕರಣಗಳು ವರದಿಯಾಗುತ್ತಿವೆ ಎಂದು ಸಚಿವಾಲಯ ವಿವರಿಸಿದೆ.

ಕರ್ನಾಟಕದಲ್ಲಿ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡು ಬಂದಿದೆ.ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿವೆ ಎಂದೂ ಹೇಳಿದೆ.‌

ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 5,70,458 ಇದೆ. ದೇಶದಲ್ಲಿ ಕೊರೊನಾದಿಂದ ಪ್ರತಿನಿತ್ಯ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಪ್ರತಿ ಹತ್ತುಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಅತಿಕಡಿಮೆ ಸಾವಿನ ಪ್ರಕರಣಗಳು ಅಂದರೆ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 88 ಸಾವಿನ ಪ್ರಕರಣಗಳು ವರದಿಯಾಗಿವೆ.

ಚೇತರಿಕೆ ಪ್ರಮಾಣ ಶೇ 91.54ಕ್ಕೆ ಏರಿಕೆ

ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಭಾರತದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ 91.54ಕ್ಕೆ ಏರಿದೆ. 24 ಗಂಟೆಗಳ ಅವಧಿಯಲ್ಲಿ ಒಟ್ಟು 58,684 ಮಂದಿ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 46,963 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಚೇತರಿಸಿಕೊಂಡ ರಾಜ್ಯಗಳ ಪೈಕಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಮುಂಚೂಣಿಯಲ್ಲಿವೆ. ಈ ರಾಜ್ಯಗಳಲ್ಲಿ ಒಂದೇ ದಿನ 7 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ 4 ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ಗಂಟೆಗಳ ಅವಧಿಯಲ್ಲಿ ಒಟ್ಟು 470 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಾರಾಷ್ಟದಲ್ಲೇ 74 ಸಾವಿನ ಪ್ರಕರಣಗಳು ವರದಿಯಾಗಿವೆ.

ದೆಹಲಿ: ಹೋಂ ಕ್ವಾರಂಟೈನ್ ಸಂಖ್ಯೆಯಲ್ಲಿ ಹೆಚ್ಚಳ

‌ದೆಹಲಿಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ ಕೋವಿಡ್‌–19 ರೋಗಿಗಳ ಸಂಖ್ಯೆ 5,800ಕ್ಕಿಂತಲೂ ಹೆಚ್ಚಿನ ಪ್ರಮಾಣ ತಲುಪಿದೆ.

ಕಳೆದ ಹತ್ತು ದಿನಗಳಲ್ಲಿ ಹಬ್ಬದ ಆಚರಣೆ, ಮಾಲಿನ್ಯ ಪ್ರಮಾಣದಲ್ಲಿ ಏರಿಕೆ ಮತ್ತು ಜನಸಂದಣಿ ಹೆಚ್ಚಿದ ಕಾರಣ ದೈನಂದಿನ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿಅಂಶಗಳು ತಿಳಿಸಿವೆ.

ಅ. 19ರಂದು 14,164 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರು. ಅ. 20ರಂದು ಈ ಪ್ರಮಾಣ 14,046ಕ್ಕೆ ಇಳಿದಿತ್ತು. ಆದರೆ, ಅ. 21ರಿಂದ 31ರ ಅವಧಿಯಲ್ಲಿ ಈ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿ, ಹೋಂ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ 20,093ಕ್ಕೆ (ಶೇ 41) ಏರಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆಯೂ 2,724ರಿಂದ 3,274ಕ್ಕೆ ಏರಿದೆ.

ಅ. 21ರಿಂದ 31ರ ಅವಧಿಯಲ್ಲಿ ಜನರು ಹಬ್ಬದ ಆಚರಣೆ, ಮಾಲ್‌, ಚಿತ್ರಮಂದಿರಗಳಿಗೆ ಭೇಟಿ ನೀಡುವುದು ಮಾಡಿದ್ದರಿಂದ ಮಾಲಿನ್ಯದ ಮಟ್ಟದಲ್ಲೂ ಏರಿಕೆಯಾಗಿದೆ. ಅಷ್ಟೇ ಅಲ್ಲ, ಕೋವಿಡ್‌–19 ಸುರಕ್ಷತಾ ಮಾರ್ಗಸೂಚಿಗಳೂ ಸರಿಯಾಗಿ ಪಾಲನೆಯಾಗದಿರುವುದೇ ದೆಹಲಿಯಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಗೆ ಕಾರಣವಾಗಿದೆ. ಇದು ಹೋಂ ಕ್ವಾರಂಟೈನ್‌ಗೊಳಗಾಗುವರ ಸಂಖ್ಯೆಯ ಮೇಲೂ ನೇರ ಪರಿಣಾಮ ಬೀರಿದೆ‌ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT