ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ಗಡಿ ಕೇಂದ್ರಗಳ ನಿಯಂತ್ರಣ ಕಳೆದ ಭಾರತ: ಪೊಲೀಸ್‌ ಅಧಿಕಾರಿಯಿಂದ ವರದಿ ಬಹಿರಂಗ

ಲಡಾಖ್‌: ಆತಂಕದ ವರದಿ ಬಹಿರಂಗಪಡಿಸಿರುವ ಲೆಹ್‌ನ ಪೊಲೀಸ್‌ ಅಧಿಕಾರಿ
Last Updated 25 ಜನವರಿ 2023, 19:12 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ 65 ಗಸ್ತು ಕೇಂದ್ರಗಳ ಪೈಕಿ 26 ಗಡಿ ಕೇಂದ್ರಗಳಲ್ಲಿ ಭಾರತ ಪ್ರವೇಶ ಕಳೆದುಕೊಂಡಿದ್ದು, ಅಷ್ಟೂ ಕೇಂದ್ರಗಳನ್ನು ‘ಬಫರ್‌ ವಲಯ’ವಾಗಿಸಿ ಚೀನಾ ಇಂಚಿಂಚೆ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಉನ್ನತ ಪೊಲೀಸ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಪ್ರಮುಖ ನಗರ ಲೆಹ್‌ನ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಡಿ.ನಿತ್ಯಾ ಅವರು ಈ ಸಂಶೋಧನಾ ವರದಿಯನ್ನು ಸಲ್ಲಿಸಿದ್ದಾರೆ. ಈ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಭದ್ರತಾ ಸಲಹೆಗಾರ ಅಜಿತ್‌ ಡೋಬಾಲ್‌ ಅವರು ಉಪಸ್ಥಿತರಿದ್ದರು.

3,500 ಕಿ.ಮೀ. ಉದ್ದದ ಗಡಿಯಲ್ಲಿ ಚೀನಾದ ಜತೆಗೆ ದೇಶವು ವಿವಿಧೆಡೆ ಗಡಿ ಸಂಘರ್ಷ ಎದುರಿಸುತ್ತಿರುವಾಗ ಈ ಮಾಹಿತಿ ಬಹಿರಂಗವಾಗಿರುವುದು ಆತಂಕಕಾರಿಯಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಗಡಿಯಲ್ಲಿ ಅಕ್ಷರಶಃ ಯಥಾಸ್ಥಿತಿಯನ್ನು ಏಕಮುಖವಾಗಿ ಬದಲಾಯಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಭಾರತವು ಆರೋಪಿಸಿದ ತಿಂಗಳ ನಂತರ ಈ ವರದಿ ಹೊರಬಿದ್ದಿದೆ.

‘ಪ್ರಸ್ತುತ 65 ಗಡಿ ಗಸ್ತು ಕೇಂದ್ರಗಳು ಕಾರಕೊರಾಮ್ ಪಾಸ್‌ನಿಂದ ಚುಮೂರ್‌ ವರೆಗೆ ಇದ್ದವು. ಇವುಗಳನ್ನು ಭಾರತೀಯ ಭದ್ರತಾ ಪಡೆಗಳು (ಐಎಸ್‌ಎಫ್‌ಗಳು) ನಿಯಮಿತವಾಗಿ ಗಸ್ತು ತಿರುಗಿಸಬೇಕು. ಈ 65 ಗಸ್ತು ಕೇಂದ್ರಗಳಲ್ಲಿ 26 ಗಸ್ತು ಕೇಂದ್ರಗಳಲ್ಲಿ ಅಂದರೆ, 5ರಿಂದ 17, 24ರಿಂದ 32 ಹಾಗೂ 37ನೇ ಗಸ್ತು ಕೇಂದ್ರಗಳು ನಿರ್ಬಂಧಿತ ಅಥವಾ ಗಸ್ತು ತಿರುಗದ ಕಾರಣ ಅಲ್ಲಿ ಎಎಸ್‌ಎಫ್‌ ಉಪಸ್ಥಿತಿ ಇಲ್ಲದಂತಾಗಿದೆ ಎಂದು ನಿತ್ಯಾ ಅವರು ವರದಿ ಸಲ್ಲಿಸಿದ್ದಾರೆ. ‘ಈ ಗಸ್ತು ಕೇಂದ್ರಗಳ ಪ್ರದೇಶಗಳಲ್ಲಿ ಚೀನಿಯರು ಇದ್ದಾರೆ. ಈ ಜಾಗಗಳಲ್ಲಿ ಐಎಸ್ಎಫ್ ಅಥವಾ ಭಾರತೀಯ ನಾಗರಿಕರ ಉಪಸ್ಥಿತಿ ದೀರ್ಘಕಾಲದಿಂದ ಇಲ್ಲವೆಂದು ಒಪ್ಪಿಕೊಳ್ಳುವಂತೆ ನಮ್ಮ ಮೇಲೆ ಚೀನಿ ಪಡೆ ಒತ್ತಡ ಹೇರುತ್ತಿದೆ. ಇದನ್ನು ಬಫರ್ ವಲಯವಾಗಿಸಿ, ಗಡಿಯಲ್ಲಿ ಒಮ್ಮುಖ ಬದಲಾವಣೆಗೆ ಕಾರಣವಾಗುತ್ತದೆ. ಅಂತಿಮವಾಗಿ ಭಾರತ ಈ ಪ್ರದೇಶಗಳ ಮೇಲೆ ನಿಯಂತ್ರಣ ಕಳೆದುಕೊಳ್ಳಬೇಕಾಗುತ್ತದೆ. ಇಂಚಿಂಚು ಭೂಮಿಯನ್ನು ಅತಿಕ್ರಮಿಸುವ ‘ಸಲಾಮಿ ಸ್ಲೈಸಿಂಗ್‌’ ತಂತ್ರವನ್ನು ಚೀನಾ ಪಿಎಲ್‌ಎ ಸೇನೆ ಅನುಸರಿಸುತ್ತಿದೆ’ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ. ಈ ವರದಿಯನ್ನು ಭಾರತದ ರಕ್ಷಣಾ ಸಚಿವಾಲಯ ಅಲ್ಲಗಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT