ಬುಧವಾರ, ಮೇ 25, 2022
29 °C

ಓಮೈಕ್ರಾನ್ ಪ್ರಕರಣ ಹೆಚ್ಚಿದರೂ ತೀವ್ರತೆ ಕಡಿಮೆ: ವೈದ್ಯೆ ಏಂಜೆಲಿಕ್ ಕೊಯೆಟ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ‘ಭಾರತದಲ್ಲಿ ಓಮೈಕ್ರಾನ್ ಸೇರಿದಂತೆ ಕೊರೊನಾ ವೈರಸ್ ಪ್ರಕರಣಗಳಲ್ಲಿ ಹಾಗೂ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡುಬರಲಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಪ್ರಕರಣಗಳಿಗೆ ಹೋಲಿಸಿದರೆ, ಸೌಮ್ಯ ಸ್ವರೂಪದಲ್ಲಿ ಇರಲಿವೆ’ ಎಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಓಮೈಕ್ರಾನ್ ಗುರುತಿಸಿದ್ದ ವೈದ್ಯೆ ಏಂಜೆಲಿಕ್ ಕೊಯೆಟ್ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘದ ಅಧ್ಯಕ್ಷೆಯೂ ಆಗಿರುವ ಅವರು, ಓಮೈಕ್ರಾನ್ ಪ್ರಸರಣವನ್ನು ಈಗ ಲಭ್ಯವಿರುವ ಲಸಿಕೆಗಳು ನಿಯಂತ್ರಿಸಲಿವೆ ಎಂದು ಹೇಳಿದ್ದಾರೆ. 

‘ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಅಥವಾ ಈ ಮೊದಲೇ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯಿಂದ ಸೋಂಕು ಪಸರಿಸುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಯಿಂದ ಸೋಂಕು ಹರಡುವ ಸಂಭಾವ್ಯತೆ ಪ್ರಮಾಣ ಶೇ 100ರಷ್ಟು ಇರುತ್ತದೆ’ ಎಂದಿದ್ದಾರೆ. 

ಕೊರೊನಾ ವೈರಸ್ ತಳಿಗಳಲ್ಲಿ ಕಡಿಮೆ ತೀವ್ರತೆ ಹೊಂದಿರುವ ಓಮೈಕ್ರಾನ್‌ ಬಳಿಕ ಕೋವಿಡ್ ಸಾಂಕ್ರಾಮಿಕ ಅಂತ್ಯವಾಗಲಿದೆ ಎಂಬ ತಜ್ಞರ ಅಭಿಪ್ರಾಯವನ್ನು ಅವರು ಒಪ್ಪಿಲ್ಲ. ‘ಕೋವಿಡ್ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಅದು ಸ್ಥಳೀಯವಾಗಿ ಕಂಡುಬರಲಿದೆ’ ಎಂದು ಹೇಳಿದ್ದಾರೆ. 

‘ಓಮೈಕ್ರಾನ್‌ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದರೂ, ಅದು ಭಾರಿ ಅಪಾಯಕಾರಿ ಅಲ್ಲ. ಆಸ್ಪತ್ರೆಗೆ ಸೇರುವ ಗಂಭೀರ ಸ್ವರೂಪದ ಪ್ರಕರಣಗಳು ಕಡಿಮೆ ಇರುತ್ತವೆ. ಮಕ್ಕಳಿಗೂ ಇದು ಹರಡಬಲ್ಲದು. ಆದರೆ ಐದಾರು ದಿನಗಳಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ’ ಎಂದು ವಿವರಿಸಿದ್ದಾರೆ. 

ಅಸ್ಸಾಂನಲ್ಲಿ ರಾತ್ರಿ ಕರ್ಫ್ಯೂ ಜಾರಿ
ಗುವಾಹಟಿ
: ಓಮೈಕ್ರಾನ್ ಪ್ರಸರಣ ಭೀತಿಯಿಂದ ಅಸ್ಸಾಂ ಸರ್ಕಾರವು ಭಾನುವಾರ ರಾತ್ರಿಯಿಂದ ರಾಜ್ಯದಲ್ಲಿ ರಾತ್ರಿ ಕರ್ಫೂ ವಿಧಿಸಲು ನಿರ್ಧರಿಸಿದೆ. ಆದರೆ ಹೊಸ ವರ್ಷಾಚರಣೆ ನಿಮಿತ್ತ, ಡಿಸೆಂಬರ್ 31ರಂದು ರಾತ್ರಿ ಕರ್ಫ್ಯೂ ಇರುವುದಿಲ್ಲ. ಪ್ರತಿನಿತ್ಯ ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. 

*
ಮಹಾರಾಷ್ಟ್ರದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ನಿತ್ಯ 800 ಟನ್‌ಗೆ ತಲುಪುವವರೆಗೂ ರಾಜ್ಯದಲ್ಲಿ ಲಾಕ್‌ಡೌನ್ ಹೇರುವುದಿಲ್ಲ.  -ರಾಜೇಶ್ ಟೋಪೆ, ಮಹಾರಾಷ್ಟ್ರ ಆರೋಗ್ಯ ಸಚಿವ

*
ಓಮೈಕ್ರಾನ್ ಮುಂದಿನ ದಿನಗಳಲ್ಲಿ ರೂಪಾಂತರ ಹೊಂದಬಹುದು. ಆಗ ಅದರ ಸ್ವರೂಪವು ಮಾರಣಾಂತಿಕ ಆಗಬಹುದು, ಆಗದೆಯೂ ಇರಬಹುದು.
-ಏಂಜೆಲಿಕ್ ಕೊಯೆಟ್ಜಿ, ಮೊದಲ ಓಮೈಕ್ರಾನ್ ಗುರುತಿಸಿದ್ದ ವೈದ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು