ಭಾನುವಾರ, ಜುಲೈ 3, 2022
24 °C
ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸಿಟಿ ಸೆಂಟ್ರಲ್ ಪಾರ್ಕ್‌

ಗಾಂಧಿ ಪುತ್ಥಳಿ ಧ್ವಂಸ ಪ್ರಕರಣ: ಭಾರತೀಯ ಅಮೆರಿಕನ್ನರ ಶಾಂತಿ ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕಳೆದ ವಾರ (ಜನವರಿ 27) ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್‌ ನಗರದ ಸಿಟಿ ಸೆಂಟ್ರಲ್‌ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ ಅಮೆರಿಕನ್ ನಾಗರಿಕರು ಸೆಂಟ್ರಲ್‌ ಸಿಟಿ ಪಾರ್ಕ್‌ನಲ್ಲಿ ಶಾಂತಿ ಸಭೆ ನಡೆಸಿದರು.

ಇಂಡಿಯನ್ ಅಸೋಸಿಯೇಷನ್ ಆಫ್ ಸ್ಯಾಕ್ರಮೆಂಟೊ (ಐಎಎಸ್) ಮತ್ತು ಇತರ ಭಾರತೀಯ-ಅಮೆರಿಕನ್ ಮತ್ತು ಹಿಂದೂ-ಅಮೆರಿಕನ್ ಸಂಸ್ಥೆಗಳು ಜಂಟಿಯಾಗಿ ಶಾಂತಿ ಸಭೆಯನ್ನು ಆಯೋಜಿಸಿದ್ದವು.

ಸಭೆಯಲ್ಲಿ ಮಾತನಾಡಿದ  ಡೇವಿಸ್ ನಗರದ ಮೇಯರ್ ಗ್ಲೋರಿಯಾ ಪಾರ್ಟಿಡ,  ಘಟನೆ ಬಗ್ಗೆ ತೀವ್ರ ಅಘಾತ ವ್ಯಕ್ತಪಡಿಸಿದರು. ‘ಇದು ಕ್ಷಮಿಸಲಾರದ ಕೃತ್ಯ. ಗಾಂಧಿ ನಮ್ಮೆಲ್ಲರ ಸ್ಪೂರ್ತಿ. ಇಂಥ ವಿಧ್ವಂಸಕ ಕೃತ್ಯಗಳನ್ನು ನಾವೆಂದೂ ಸಹಿಸುವುದಿಲ್ಲ‘ ಎಂದು  ಹೇಳಿದರು.

ಶಾಂತಿ ಸಭೆ ನಡೆಯುವ ವೇಳೆ, ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ನೇತೃತ್ವದ ‘ಆರ್ಗನೈಸೇಶನ್ ಫಾರ್ ಮೈನಾರಿಟಿಸ್ ಇನ್ ಇಂಡಿಯಾ‘ (ಒಎಫ್‌ಎಂಐ) ಸದಸ್ಯರು, ಗಾಂಧಿ ವಿರುದ್ಧ ಕೆಟ್ಟ ಪದಗಳೊಂದಿಗೆ ಘೋಷಣೆಗಳನ್ನು ಕೂಗಿದರು ಮತ್ತು ಶಾಂತಿ ಸಭೆಯನ್ನು ಭಂಗಗೊಳಿಸಲು ಪ್ರಯತ್ನಿಸಿದರು.

ಇದೇ ವೇಳೆ ಪ್ರತಿಭಟನಾಕಾರರು ಗಾಂಧಿ ಪುತ್ಥಳಿಯನ್ನು ಪಾರ್ಕ್‌ನಲ್ಲಿ ಮರು ಸ್ಥಾಪಿಸಕೂಡದು ಎಂದು ಒತ್ತಾಯಿಸಿದರು. ಪ್ರತಿಭಟನೆಯ ಭಾಗವಾಗಿದ್ದ ಒಎಫ್‌ಎಂಐ ಸಂಘಟನೆಯ ನಾನಕ್ ಭಟ್ಟಿ, ‘ಡೇವಿಸ್ ನಗರ ಗಾಂಧಿ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವಲ್ಲ. ಈ ಮೊದಲು ಪುತ್ಥಳಿಯನ್ನು ಏಕೆ ಸ್ಥಾಪಿಸಿದ್ದಾರೆ?‘ ಎಂದು ಪ್ರಶ್ನಿಸಿದರು.

‘ಖಾಲಿಸ್ತಾನ್ ಪರ ಪ್ರತಿಭಟನಾಕಾರರು ಈ ಸಭೆಯನ್ನು ನಿಲ್ಲಿಸುವ ಸಲುವಾಗಿ, ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಮಹಿಳಾ ಭಾಷಣಕಾರರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು‘ ಎಂದು ಸಭೆ ಆಯೋಜಿಸಿದ್ದ ಐಎಎಸ್ ಸಂಘಟಕರು ತಿಳಿಸಿದರು.

‘ಗದ್ದಲ ಉಂಟು ಮಾಡುತ್ತಿದ್ದ ಖಾಲಿಸ್ತಾನ್ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಆಯೋಜಕರು ಪೊಲೀಸರನ್ನು ಕರೆಸಿದರು. ಮಹಿಳೆಯರ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‘ ಎಂದು ಸಂಘ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಾಂತಿ ಸಭೆಯ ಆಯೋಜಕರ ಪ್ರಕಾರ, 2016ರಲ್ಲಿ ಈ ಡೇವಿಸ್ ನಗರದ ಸಿಟಿ ಸೆಂಟ್ರಲ್‌ ಪಾರ್ಕ್‌ನಲ್ಲಿ ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಿದಾಗಿನಿಂದ, ಅದನ್ನು ತೆಗೆಯುವಂತೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಯ (ಒಎಫ್‌ಎಂಐ) ನಾಯಕರಾದ ಭಜನ್ ಸಿಂಗ್ ಭಿಂದಾರ್ ಮತ್ತು ಪೀಟರ್ ಫ್ರೆಡ್ರಿಚ್‌ ಒತ್ತಾಯಿಸುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು