ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋ–ವಿನ್ ಸಾಫ್ಟ್‌ವೇರ್‌ ದೋಷ, ಹಿಂಜರಿಕೆಯಿಂದ ಲಸಿಕೆ ಅಭಿಯಾನಕ್ಕೆ ಹಿನ್ನಡೆ

Last Updated 18 ಜನವರಿ 2021, 3:28 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಉತ್ತಮ ಆರಂಭ ಕಂಡ ಬೃಹತ್ ಕೋವಿಡ್ ಲಸಿಕೆ ಅಭಿಯಾನ ಕೋ-ವಿನ್ ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ತೊಂದರೆಗಳು ಮತ್ತು ಲಸಿಕೆ ಸ್ವೀಕಾರಕ್ಕೆ ಹಿಂಜರಿಕೆಯಿಂದಾಗಿ ನಿಧಾನಗತಿಯಲ್ಲಿ ಸಾಗಿದೆ.

ದಕ್ಷಿಣ ಭಾರತದ 4 ರಾಜ್ಯಗಳು ಸೇರಿ ಭಾನುವಾರ ದೇಶದ ಆರು ರಾಜ್ಯಗಳ 553 ಸ್ಥಳಗಳಲ್ಲಿ 17,000 ಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಅದರಲ್ಲಿ ಆಂಧ್ರಪ್ರದೇಶದಲ್ಲಿ (308) ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ಅಭಿಯಾನ ನಡೆದಿದೆ. ತಮಿಳುನಾಡು (165), ಕರ್ನಾಟಕ (64) ಮತ್ತು ಕೇರಳ (1) ಹಾಗೂ ಅರುಣಾಚಲ ಪ್ರದೇಶ (14) ಮತ್ತು ಮಣಿಪುರದಲ್ಲಿ (1) ಅಭಿಯಾನ ನಡೆದಿದೆ.

ಪ್ರತಿ ಲಸಿಕೆ ಕೇಂದ್ರದಲ್ಲಿ ದಿನಕ್ಕೆ ಕನಿಷ್ಠ 100 ಜನರಿಗೆ ಲಸಿಕೆ ಹಾಕುವ ಸರ್ಕಾರದ ಯೋಜನೆಯ ಪ್ರಕಾರ, ಸುಮಾರು 55,300 ಜನರಿಗೆ ಭಾನುವಾರ ಲಸಿಕೆ ನೀಡಬೇಕಾಗಿತ್ತು. ಆದರೆ, ಅದರ ಬದಲಾಗಿ ಕೇವಲ 17,072 ವ್ಯಕ್ತಿಗಳು ಮಾತ್ರ ಲಸಿಕೆ ಪಡೆದಿದ್ದಾರೆ. ಹಾಗಾಗಿ, ಶೇ. 69% ನಷ್ಟು ಕೊರತೆ ಉಂಟಾಗಿದೆ. ಅದೇ ರೀತಿ ಒಂದು ದಿನದ ಕೊರತೆಯು 38% ಆಗಿದ್ದು, 3,35,200ರ ಬದಲು 2,07,229 ಜನರು ಲಸಿಕೆ ಪಡೆದಿದ್ದಾರೆ.

ಲಸಿಕೆ ವಿತರಣೆ ಪ್ರಕ್ರಿಯೆಗೆ ತೊಡಕಾಗದಂತೆ ವಾರದಲ್ಲಿ ನಾಲ್ಕು ದಿನ ಲಸಿಕೆ ಹಾಕಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಂಧ್ರಪ್ರದೇಶರಾಜ್ಯವು ವಾರದಲ್ಲಿ 6 ದಿನ ಲಸಿಕೆ ವಿತರಣೆಗೆ ನಿರ್ಧರಿಸಿದೆ. ಹಲವು ಕಡೆ ವಾರದಲ್ಲಿ ನಾಲ್ಕು ದಿನಕ್ಕೆ ನಿರ್ಧರಿಸಿದ್ದರೆ, ಉತ್ತರ ಪ್ರದೇಶದಲ್ಲಿ ವಾರಕ್ಕೆ ಎರಡು ದಿನ ಲಸಿಕೆ ನೀಡುವ ಕಾರ್ಯಕ್ರಮ ನಡೆಸಲಾಗುತ್ತಿದೆ.

"ಇವು ಆರಂಭಿಕ ದಿನಗಳು. ಕೋ-ವಿನ್ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಸಮನ್ವಯ ಕಾರ್ಯವಿಧಾನದ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು" ಎಂದು ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಎರಡು ದಿನಗಳಲ್ಲಿ 447 ಲಸಿಕೆ ಪ್ರತಿಕೂಲ ಘಟನೆಗಳು ವರದಿಯಾಗಿವೆ. ಆದರೆ, ಕೇವಲ ಮೂರು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದುಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಹೇಳಿದ್ದಾರೆ.

ದೆಹಲಿಯ ಉತ್ತರ ರೈಲ್ವೆ ಆಸ್ಪತ್ರೆ ಮತ್ತು ಏಮ್ಸ್‌ನಲ್ಲಿ ದಾಖಲಾದ ಇಬ್ಬರು ವ್ಯಕ್ತಿಗಳನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಮೂರನೇ ವ್ಯಕ್ತಿ ರಿಷಿಕೇಶ್ ಏಮ್ಸ್‌ನಲ್ಲಿ ವೈದ್ಯರ ನಿಗಾದಲ್ಲಿದ್ದು, ಆರೋಗ್ಯವಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶನಿವಾರ, ಕೋ-ವಿನ್ ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ತೊಂದರೆಗಳ ವರದಿಗಳನ್ನು ಒಪ್ಪಿಕೊಂಡ ಅಗ್ನಾನಿ, ಆ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ಆದರೂ, ಕೋ-ವಿನ್ ತೊಂದರೆಗಳಿಂದಾಗಿ ಮುಂಬೈನಲ್ಲಿ ಲಸಿಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ, ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್) ಮತ್ತು ದೇಶದಾದ್ಯಂತ ಹಲವು ಕಡೆಗಳಲ್ಲಿ ದೋಷ ಪತ್ತೆಯಾಗಿದೆ.

ಲಸಿಕೆ ಸ್ವೀಕಾರಕ್ಕೆ ಹಿಂಜರಿಕೆ ಸಹ ಕಂಡುಬರುತ್ತಿದೆ. “ಲಸಿಕೆ ಸ್ವೀಕಾರಕ್ಕೆ ಆರೋಗ್ಯ ಕಾರ್ಯಕರ್ತರಲ್ಲೇ ಆತಂಕಗಳಿವೆ. ಹಲವರು ಕಾದುನೋಡುವ ನಿರ್ಧಾರಕ್ಕೆ ಬಂದಿದ್ದಾರೆ,” ದೆಹಲಿಯ ಜಾರ್ಜ್ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಹಿರಿಯ ಸಾರ್ವಜನಿಕ ಆರೋಗ್ಯ ಸಂಶೋಧಕ ಉಮ್ಮನ್ ಜಾನ್ ಹೇಳಿದ್ದಾರೆ.

ಈ ಅಭಿಪ್ರಾಯವನ್ನು ನವದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಬಿ.ಎಲ್. ಶೆರ್ವಾಲ್ ಸಹ ಬೆಂಬಲಿಸಿದ್ದಾರೆ.

"ಲಸಿಕೆ ಬಗ್ಗೆ ಸ್ವಲ್ಪ ಆತಂಕವಿದೆ. ಅಲ್ಲದೆ, ಹೊಸ ಕಾರು ಅಥವಾ ಉಪಕರಣವನ್ನು ಖರೀದಿಸುವುದರಲ್ಲಿ ಭಾರತದಲ್ಲಿ ಜನರು ಪ್ರಮುಖ ವಿಷಯಗಳಲ್ಲಿ 'ಕಾದುನೋಡುವ' ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ, ಹಾಗಾಗಿ, ಲಸಿಕೆ ಬಗ್ಗೆ ಜನರಿಗೆ ಹೆಚ್ಚಿನ ಜಾಗೃತಿ ಮತ್ತು ವಿಶ್ವಾಸವನ್ನು ಬೆಳೆಸುವುದು ಅಗತ್ಯವಿದೆ " ಎಂದು ಶೆರ್ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT