ಗುರುವಾರ , ಜೂನ್ 30, 2022
24 °C
ಜಾಲ ರಚನೆಯ ಮೂಲಕ ಕಡಲಿನಲ್ಲಿ ಅಕ್ರಮ ಚಟುವಟಿಕೆ ತಡೆ ಯತ್ನ

ಕ್ವಾಡ್‌ ಕೂಟದ ಸಭೆ: ಸಾಗರ ನಿಗಾ ಕೇಂದ್ರ ಜೋಡಣೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದ ಮೇಲೆ ನಿಗಾ ಇರಿಸುವ ಭಾರತದ ಇನ್‌ಫರ್ಮೇಶನ್‌ ಫ್ಯೂಶನ್‌ ಸೆಂಟರ್‌ (ಐಎಫ್‌ಸಿ) ಅನ್ನು ಇತರ ದೇಶಗಳ ಇಂತಹ ಕೇಂದ್ರಗಳ ಜತೆಗೆ ಜೋಡಿಸುವ ಸಾಧ್ಯತೆ ಇದೆ. ಈ ಪ್ರದೇಶದ ಮೇಲೆ ನಿಗಾ ಇರಿಸುವ ಜಾಲ ರೂಪಿಸುವುದು ಇದರ ಉದ್ದೇಶ. ಅಕ್ರಮ ಮೀನುಗಾರಿಕೆಯ ಮೇಲೆ ಕಣ್ಗಾವಲು ಇರಿಸುವುದು ಐಎಫ್‌ಸಿಯ ಮುಖ್ಯ ಕೆಲಸ. ಆದರೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಸಾಮರ್ಥ್ಯವೂ ಈ ಕೇಂದ್ರಕ್ಕೆ ಇದೆ.

ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕದ ನಾಯಕರು ಕ್ವಾಡ್‌ನ (ಈ ನಾಲ್ಕು ದೇಶಗಳ ಕೂಟ) ಎರಡನೇ ಮುಖಾಮುಖಿ ಸಭೆಯನ್ನು ಟೋಕಿಯೊದಲ್ಲಿ ಮಂಗಳವಾರ ನಡೆಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದ ಮೇಲೆ ನಿಗಾ ಇರಿಸಲು ಉಪಗ್ರಹ ಸಂಪರ್ಕಿತ ಜಾಲವನ್ನು ಜೋಡಿಸುವ ಪ್ರಸ್ತಾವದ ಬಗ್ಗೆ ಚರ್ಚೆ ನಡೆಯಲಿದೆ. 

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌, ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ ಅವರ ನಡುವೆ ಕ್ವಾಡ್‌ ಶೃಂಗ ಸಭೆ ನಡೆಯಲಿದೆ. 

ಭಾರತದ ನೌಕಾಪಡೆಯ ಐಎಫ್‌ಸಿಯನ್ನು ಗುರುಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಕಡಲ್ಗಳ್ಳತನ, ದರೋಡೆ, ಕಳ್ಳ ಸಾಗಾಟ, ಅಕ್ರಮ ಮೀನುಗಾರಿಕೆ, ಅಸಹಜ ಮಾನವ ಸಂಚಾರ ಮತ್ತು ಇತರ ಸಾಗರ ಸವಾಲುಗಳ ಮೇಲೆ ಈ ಕೇಂದ್ರವು ನಿಗಾ ಇರಿಸುತ್ತದೆ. 2021ರಲ್ಲಿ ಅಕ್ರಮ ಮೀನುಗಾರಿಕೆಯ 399 ಪ್ರಕರಣಗಳನ್ನು ಈ ಕೇಂದ್ರವು ಗುರುತಿಸಿತ್ತು. ಕಳೆದ ತಿಂಗಳು ಇಂತಹ 40 ಪ್ರಕರಣಗಳು ನಡೆದಿದ್ದವು. 

ಪ್ರಸ್ತಾವಿತ ಜಾಲವು ಮಹತ್ವದ್ದಾಗಿದೆ. ಕ್ವಾಡ್‌ ಸದಸ್ಯ ರಾಷ್ಟ್ರಗಳ ನಡುವೆ ಇಂತಹುದೊಂದು ಜಾಲ ರಚನೆಯಾದರೆ, ಹಿಂದೂ ಮಹಾಸಾಗರದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವುದು ಸಾಧ್ಯ ಎಂದು ಮೂಲಗಳು ಹೇಳಿವೆ. 

ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲತೆಯನ್ನು ತಡೆಯುವುದಕ್ಕಾಗಿ ಭಾರತ, ಜಪಾನ್‌, ಆಸ್ಟ್ರೇಲಿಯಾ ಮತ್ತು ಅಮೆರಿಕ ಜತೆಯಾಗಿ ಕ್ವಾಡ್‌ ಕೂಟವನ್ನು ರಚಿಸಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು