ಶನಿವಾರ, ಆಗಸ್ಟ್ 13, 2022
26 °C

ಸಿಖ್ಖರ ಪರವಾದ ಮೋದಿ ನಿರ್ಣಯಗಳಿಗೆ ಪ್ರಚಾರ: 5 ದಿನಗಳಲ್ಲಿ 2 ಕೋಟಿ ಇ-ಮೇಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಖ್ ಸಮುದಾಯವನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಈ ವರೆಗೆ ತೆಗೆದುಕೊಂಡ 13 ನಿರ್ಧಾರಗಳನ್ನು ಪಟ್ಟಿ ಮಾಡಿ 'ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ)' ಡಿ. 8 ರಿಂದ 12ರ ನಡುವೆ ಸುಮಾರು ಎರಡು ಕೋಟಿ ಇ-ಮೇಲ್‌ಗಳನ್ನು ತನ್ನ ಗ್ರಾಹಕರಿಗೆ ಕಳುಹಿಸಿರುವುದು ಬಹಿರಂಗವಾಗಿದೆ.

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ ಮತ್ತು ಹರಿಯಾಣದ ರೈತರು ತೀವ್ರಸ್ವರೂಪದ ಹೋರಾಟ ಕೈಗೊಂಡಿರುವ ನಡುವೆಯೇ ನಡೆದಿರುವ ಈ ಬೆಳವಣಿಗೆ ಎಲ್ಲರ ಗಮನಸೆಳೆದಿದೆ.

'ಸಿಖ್ಖರೊಂದಿಗೆ ಪ್ರಧಾನಿ ಮೋದಿ ಮತ್ತು ಸರ್ಕಾರದ ಸಂಬಂಧ' ಎಂಬ 47 ಪುಟಗಳ ಡಿಜಿಟಲ್‌ ರೂಪದ ಪುಸ್ತಕವನ್ನು ಐಆರ್‌ಸಿಟಿಸಿ ತನ್ನ ಗ್ರಾಹಕರಿಗೆ ಇ-ಮೇಲ್‌ ಮೂಲಕ ರವಾನಿಸಿದೆ. ಕಾಯ್ದೆ ಮತ್ತು ಕಾನೂನುಗಳ ಬಗ್ಗೆ ನಾಗರಿಕರನ್ನು ಜಾಗೃತರನ್ನಾಗಿಸುವ, ಸರ್ಕಾರದ ವಿರುದ್ಧ ಜನರಲ್ಲಿ ಇರಬಹುದಾದ ಅನುಮಾನಗಳನ್ನು ನೀಗಿಸುವ, ಸರ್ಕಾರದ ಸಾರ್ವಜನಿಕ ಹಿತಾಸಕ್ತಿಯನ್ನು ಜನರಿಗೆ ತಿಳಿಸುವ ಪ್ರಯತ್ನವಾಗಿ ಸಂದೇಶ ಕಳುಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಟಲ್‌ ರೂಪದ ಈ ಪುಸ್ತಕವು ಹಿಂದಿ, ಇಂಗ್ಲಿಷ್‌ ಜೊತೆಗೆ ಪಂಜಾಬಿಯಲ್ಲೂ ಮುದ್ರಣಗೊಂಡಿರುವುದು ವಿಶೇಷ. ಟಿಕೆಟ್‌ ಬುಕಿಂಗ್‌ ವೇಳೆ ಗ್ರಾಹಕರು ತಮ್ಮ ವಿಳಾಸದ ವಿವರದೊಂದಿಗೆ ತಮ್ಮ ಇ-ಮೇಲ್‌ಗಳನ್ನೂ ರೈಲ್ವೆ ಇಲಾಖೆಗೆ ನೀಡಿರುತ್ತಾರೆ. ಹೀಗೆ ಸಂಗ್ರಹಿಸಿದ ಅಷ್ಟೂ ಇ-ಮೇಲ್‌ಗಳಿಗೂ ಐಆರ್‌ಸಿಟಿಸಿ ಸಂದೇಶ ಕಳುಹಿಸಿರುವುದಾಗಿ ಗೊತ್ತಾಗಿದೆ. ಆದರೆ, ಡಿ. 12ರ ನಂತರ ಸಂದೇಶ ರವಾನೆ ನಿಲ್ಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸಿಖ್‌ ಸಮುದಾಯಕ್ಕೆ ಮಾತ್ರವೇ ಸರ್ಕಾರ ಈ ಸಂದೇಶಗಳನ್ನು ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದನ್ನು ಐಆರ್‌ಸಿಟಿಸಿ ನಿರಾಕರಿಸಿದೆ.

'ಸಮುದಾಯ ಬೇಧವಿಲ್ಲದೇ ಇ-ಮೇಲ್‌ಗಳನ್ನು ಕಳುಹಿಸಲಾಗಿದೆ. ಸಿಖ್ಖರನ್ನು ಗುರಿಯಾಗಿಸಿಕೊಂಡು ರವಾನಿಸಲಾಗಿಲ್ಲ. ಈ ರೀತಿಯ ಪ್ರಕ್ರಿಯೆ ಇದೇ ಮೊದಲೇನೂ ಅಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಪ್ರಚುರಪಡಿಸಲು ಐಆರ್‌ಸಿಟಿಸಿಯು ಈ ಹಿಂದೆ ಇಂತಹ ಚಟುವಟಿಕೆಗಳನ್ನು ನಡೆಸಿದೆ' ಎಂದು ಐಆರ್‌ಸಿಟಿಸಿ ತಿಳಿಸಿದೆ.

'ಐಆರ್‌ಸಿಟಿಸಿ ಅಕ್ಟೋಬರ್ 12 ರವರೆಗೆ ಐದು ದಿನಗಳಲ್ಲಿ 1.9 ಕೋಟಿ ಇಮೇಲ್‌ಗಳನ್ನು ಕಳುಹಿಸಿದೆ' ಎಂದು ರೈಲ್ವೆ ಮೂಲವೊಂದು ತಿಳಿಸಿದೆ.

ಸಾರ್ವಜನಿಕ ಹಿತಾಸಕ್ತಿಗಾಗಿ ಸಂವಹನ ಕಾರ್ಯತಂತ್ರದ ಭಾಗವಾಗಿ ಇಮೇಲ್‌ಗಳನ್ನು ಪ್ರಜ್ಞಾಪೂರ್ವಕವಾಗಿಯೇ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


'ಸಿಖ್ಖರೊಂದಿಗೆ ಪ್ರಧಾನಿ ಮೋದಿ ಮತ್ತು ಸರ್ಕಾರದ ಸಂಬಂಧ' ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು