ಮಂಗಳವಾರ, ಸೆಪ್ಟೆಂಬರ್ 28, 2021
24 °C

ಪೆರೋಲ್ ಪಡೆದಿದ್ದರೂ ಜೈಲಿನಿಂದ ಹೊರಹೋಗಲೊಪ್ಪದ ಉತ್ತರ ಪ್ರದೇಶದ 21 ಕೈದಿಗಳು!

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಅಪರಾಧದಲ್ಲಿ ಜೈಲು ಸೇರಿದ ಹೆಚ್ಚಿನ ಜನರು ಜೈಲಿನಿಂದ ಹೊರಬರಲು ಏನು ಬೇಕಾದರೂ ಮಾಡುತ್ತಾರೆ. ಆದರೆ ಉತ್ತರ ಪ್ರದೇಶದ 21 ಕೈದಿಗಳು ಪೆರೋಲ್ ಬೇಡವೆಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಏಕೆಂದರೆ, ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೈಲುವಾಸ ಅನುಭವಿಸುವುದೇ ಅವರಿಗೆ 'ಸುರಕ್ಷಿತ ಮತ್ತು ಆರೋಗ್ಯಕರ'ವಾಗಿರುವುದರಿಂದಾಗಿ ಪೆರೋಲ್ ಬಯಸುವುದಿಲ್ಲ ಎಂದಿದ್ದಾರೆ.

ಪೆರೋಲ್ ಬೇಡವೆಂದು ವಿನಂತಿ ಮಾಡಿದ ಕೈದಿಗಳು ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಮೀರತ್, ಮಹಾರಾಜ್‌ಗಂಜ್, ಗೋರಖ್‌ಪುರ ಮತ್ತು ಲಖನೌ ಸೇರಿದಂತೆ ರಾಜ್ಯದ ಒಂಬತ್ತು ಜೈಲುಗಳಲ್ಲಿ ಇದ್ದಾರೆ ಎಂದು ಜೈಲು ಆಡಳಿತ ಮಹಾನಿರ್ದೇಶಕ ಆನಂದ್ ಕುಮಾರ್ ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕೈದಿಗಳು 90 ದಿನಗಳ ಪೆರೋಲ್ ಪಡೆದರೆ, ಇದು ಶಿಕ್ಷೆಯ ಅವಧಿಗೆ ಸೇರ್ಪಡೆಯಾಗಲಿದೆ. 'ಅವರು ನೀಡುವ ಇತರ ಪ್ರಮುಖ ಕಾರಣವೆಂದರೆ ಅವರು ಹೊರಗೆ ಹೋದರೆ ಅವರಿಗೆ ಜೈಲುಗಳಲ್ಲಿ ಸಿಗುವ ಆಹಾರ ಮತ್ತು ಇತರ ಆರೋಗ್ಯ ಸೌಲಭ್ಯಗಳು ಸಿಗುವುದಿಲ್ಲ' ಎಂದು ಹೇಳಿದ್ದಾರೆ.

'ಜೈಲುಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರವನ್ನು ಪಡೆಯುತ್ತಾರೆ, ಅವರು ಜೈಲುಗಳಲ್ಲಿ ಸುರಕ್ಷಿತ ಮತ್ತು ಆರೋಗ್ಯಕರವಾಗಿದ್ದಾರೆ. ಕೈದಿಗಳು ಜೈಲಿನಿಂದ ಹೊರಗೆ ಹೋದ ನಂತರ, ನಾವು ಜೀವನೋಪಾಯಕ್ಕಾಗಿ ಕಷ್ಟಪಡಬೇಕಾಗುತ್ತದೆ ಎಂದು ಕೈದಿಗಳು ಹೇಳುತ್ತಾರೆಂದು' ಆನಂದ್ ಕುಮಾರ್ ತಿಳಿಸಿದ್ದಾರೆ.

ಲಖನೌ ಜೈಲಿನಿಂದ ಇಂತಹ ನಾಲ್ಕು, ಗಾಜಿಯಾಬಾದ್‌ನಿಂದ ಮೂರು ಮತ್ತು ಮಹಾರಾಜ್‌ಗಂಜ್ ಜೈಲಿನಿಂದ ಎರಡು ಮನವಿಗಳಿವೆ.

ಕೈದಿಗಳ ಕೋರಿಕೆಗೆ ಜೈಲು ಆಡಳಿತದ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, "ಅವರು ತಮ್ಮ ಮನವಿಯನ್ನು ಲಿಖಿತವಾಗಿ ನೀಡಿದ್ದರಿಂದಾಗಿ, ಅವರ ನಿಲುವನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಗೌರವಿಸಬೇಕು' ಎಂದು ಕುಮಾರ್ ಹೇಳಿದರು.

ದೇಶದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮೇ 8 ರಂದು ಕಾರಾಗೃಹಗಳಲ್ಲಿ ದಟ್ಟಣೆ ಕಡಿಮೆಗೊಳಿಸಲು ನಿರ್ದೇಶನ ನೀಡಿತು ಮತ್ತು ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಳೆದ ವರ್ಷ ಜಾಮೀನು ಅಥವಾ ಪೆರೋಲ್ ಪಡೆದ ಎಲ್ಲ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು