ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಉಗ್ರರ ಬೆದರಿಕೆ: 10 ಸ್ಥಳಗಳಲ್ಲಿ ಪೊಲೀಸ್‌ ಶೋಧ

Last Updated 19 ನವೆಂಬರ್ 2022, 12:40 IST
ಅಕ್ಷರ ಗಾತ್ರ

ಶ್ರೀನಗರ: ಪತ್ರಕರ್ತರಿಗೆ ಉಗ್ರರು ಬೆದರಿಕೆಯೊಡ್ಡಿರುವ ಪ್ರಕರಣದ ತನಿಖೆಯ ಸಂಬಂಧ ಕೆಲವು ಪತ್ರಕರ್ತರ ಮನೆಗಳು ಸೇರಿದಂತೆ ಕಾಶ್ಮೀರದಾದ್ಯಂತ 10 ಸ್ಥಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಶೋಧ ಕಾರ್ಯ ನಡೆಸಿದರು.

‘ಪ್ರಕರಣಕ್ಕೆ ಸಂಬಂಧಿಸಿ ಶ್ರೀನಗರ, ಅನಂತನಾಗ್‌ ಮತ್ತು ಕುಲ್ಗಾಂನ ಹತ್ತು ಸ್ಥಳಗಳಲ್ಲಿ ಶೋಧ ನಡೆಸಿದ್ದೇವೆ’ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಗೌಹಾರ್‌ ಗಿಲಾನಿ, ಸ್ಥಳೀಯ ಇಂಗ್ಲಿಷ್‌ ಪತ್ರಿಕೆಯಲ್ಲಿ ಕೆಲಸ ಮಾಡುವ ಹಕೀಂ ರಶೀದ್‌, ಮಾಜಿ ಪತ್ರಕರ್ತರಾದ ಸಜಾದ್ ಕ್ರಾಲ್ಯಾರಿ, ಖಾಲಿದ್ ಗುಲ್, ಆನ್‌ಲೈನ್‌ ಸುದ್ದಿ ಪೋರ್ಟಲ್‌ನ ಖಾಜಿ ಶಿಬ್ಲಿ ಹಾಗೂ ಪತ್ರಕರ್ತ ವಸೀಂ ರಾಜ ಅವರ ಮನೆಗಳಲ್ಲಿ ಶೋಧ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಲಷ್ಕರ್-ಎ-ತಯಬಾ/ಟಿಆರ್‌ಎಫ್‌ನ ಕಮಾಂಡರ್‌ ಸಜಾದ್‌ ಶೇಖ್ ಅಲಿಯಾಸ್ ಸಜಾದ್ ಗುಲ್, ಭಯೋತ್ಪಾದಕ ಮೋಮಿನ್‌ ಗುಲ್ಜಾರ್‌, ಫೋಟೊ ಜರ್ನಲಿಸ್ಟ್‌ ಮುಖ್ತಾರ್ ಅಹ್ಮದ್ ಬಾಬಾ ಅವರ ಮನೆಗಳಲ್ಲೂ ಪೊಲೀಸರು ಶೋಧ ನಡೆಸಿದ್ದಾರೆ. ಪತ್ರಕರ್ತರಿಗೆ ಬೆದರಿಕೆಯೊಡ್ಡಿರುವುದರ ಹಿಂದೆ ಇವರ ಕೈವಾಡ ಇರುವುದಾಗಿ ಶಂಕಿಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿವೆ.

ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈಚೆಗೆ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಆನ್‌ಲೈನ್‌ ಮೂಲಕ ಬೆದರಿಕೆಯೊಡ್ಡಿತ್ತು. ಈ ಸಂಬಂಧ ಶ್ರೀನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪಾಕ್‌ ನುಸುಳುಕೋರನ ಹತ್ಯೆ(ಪಿಟಿಐ ವರದಿ):ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ ಪಾಕಿಸ್ತಾನದ ನುಸುಳುಕೋರನನ್ನು ಸೇನೆ ಹೊಡೆದುರುಳಿಸಿದೆ ಎಂದು ರಕ್ಷಣಾ ವಕ್ತಾರರು ಶನಿವಾರ ತಿಳಿಸಿದ್ದಾರೆ.

ನೌಶೇರಾ ವಲಯದ ಕಲಾಲ್‌ ಪ್ರದೇಶದಲ್ಲಿ ಉಗ್ರರು ಒಳನುಸುಳಲು ನಡೆಸಿದ ಯತ್ನವನ್ನು ಸೇನೆಯು ವಿಫಲಗೊಳಿಸಿದೆ. ಈ ವೇಳೆ ನುಸುಳುಕೋರನೊಬ್ಬ ಯೋಧರು ಇರಿಸಿದ್ದ ನೆಲಬಾಂಬ್‌ ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ. ಆತನ ಬಳಿಯಿಂದ ಎ.ಕೆ.56 ರೈಫಲ್‌ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT