ಬುಧವಾರ, ಅಕ್ಟೋಬರ್ 5, 2022
26 °C

ಕಾಶ್ಮೀರವನ್ನು ಸ್ಮಶಾನ ಮಾಡುವ ಪಾಕಿಸ್ತಾನದ ಕುತಂತ್ರಕ್ಕೆ ಅವಕಾಶ ನೀಡೆವು: ಬಿಜೆಪಿ

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರವನ್ನು ಸ್ಮಶಾನ ಮಾಡಬೇಕೆಂದು ಪಾಕಿಸ್ತಾನ ಹವಣಿಸುತ್ತಿದೆ. ಅದಕ್ಕೆ ಅವಕಾಶ ನೀಡೆವು ಎಂದು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.

ಕಾಶ್ಮೀರದ ಸೋಫಿಯಾನ ಜಿಲ್ಲೆಯ ಚೋಟಿಪೊರಾ ಬಳಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಸಹೋದರರಿಬ್ಬರ ಮೇಲೆ ಮಂಗಳವಾರ ಬೆಳಿಗ್ಗೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ರೈನಾ, ಅವರ (ಪಾಕಿಸ್ತಾನದ) ಸಂಚು ಈಡೇರಲು ನಾವು ಬಿಡುವುದಿಲ್ಲ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಸುವವರಿಗೆ ತಕ್ಕ ಶಿಕ್ಷೆ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹೇಡಿ ಭಯೋತ್ಪಾದಕರು ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸುತ್ತಿದ್ದಾರೆ. ಇಬ್ಬರು ಹಿಂದೂ ಸಹೋದರರ (ಸುನಿಲ್ ಕುಮಾರ್ ಹಾಗೂ ಪಿಂಟು ಕುಮಾರ್) ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ. ಪಾಕಿಸ್ತಾನವು ಕಾಶ್ಮೀರದಲ್ಲಿ ರಕ್ತಪಾತ ಎಸಗಲು ಯತ್ನಿಸುತ್ತಿದೆ. ಪಾಕಿಸ್ತಾನಿ ಉಗ್ರರು ಕಾಶ್ಮೀರ ಜನತೆಯ ಶತ್ರುಗಳು ಎಂದು ಅವರು ಹೇಳಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಯಲ್ಲಿ ರಾಹುಲ್‌ ಭಟ್‌ ಎನ್ನುವ ಕಾಶ್ಮೀರಿ ಪಂಡಿತರೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದರು. ಇದು ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.

ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ನಿರಂತರ ದಾಳಿಗಳು ನಡೆಯುತ್ತಿರುವುದಕ್ಕೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಬಿಜೆಪಿ ವಿರುದ್ಧ ಒವೈಸಿ ಟೀಕೆ:

‘ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ನೇಮಕ ಮಾಡಿರುವ ಲೆಫ್ಟಿನೆಂಟ್ ಗವರ್ನರ್ ಅಧಿಕಾರದಲ್ಲಿದ್ದರೂ ಆಡಳಿತ ವಿಫಲವಾಗಿದೆ. 370ನೇ ವಿಧಿ ರದ್ದತಿಯಿಂದ ಪ್ರಯೋಜನವಾಗಿಲ್ಲ. ಇದು ಕಾಶ್ಮೀರಿ ಪಂಡಿತರ ಮೇಲೆ ನಡೆಯುತ್ತಿರುವ ಮೊದಲ ದಾಳಿಯಲ್ಲ. ಕೇಂದ್ರ ಸರ್ಕಾರವು ಭದ್ರತೆ ಒದಗಿಸಲು ವಿಫಲವಾಗಿದ್ದು, ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯುತ್ತಿದ್ದಾರೆ’ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು