ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: 370ನೇ ವಿಧಿ ರದ್ದತಿ ಬಳಿಕ ಹಿಂಸಾಚಾರದಲ್ಲಿ ಗಣನೀಯ ಇಳಿಕೆ

Last Updated 5 ಆಗಸ್ಟ್ 2022, 6:22 IST
ಅಕ್ಷರ ಗಾತ್ರ

ಶ್ರೀನಗರ: 370ನೇ ವಿಧಿ ರದ್ದತಿಯ ನಂತರದ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.

2016ರ ಆಗಸ್ಟ್ 5ರಿಂದ 2019ರ ಆಗಸ್ಟ್ 5ರ ಅವಧಿಯಲ್ಲಿ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳ ವೇಳೆ ಪೊಲೀಸರು ಹಾಗೂ ಭದ್ರತಾ ಪಡೆಗಳಿಂದ 124 ಮಂದಿ ನಾಗರಿಕರು ಹತರಾಗಿದ್ದರು. ಇಂಥ ಒಂದೇ ಒಂದು ಪ್ರಕರಣ ಕಳೆದ ಮೂರು ವರ್ಷಗಳಲ್ಲಿ ವರದಿಯಾಗಿಲ್ಲ ಎಂಬುದು ಅಂಕಿಅಂಶಗಳಿಂದ ಗೊತ್ತಾಗಿದೆ.

2016ರಿಂದ 2019ರ ಅವಧಿಯಲ್ಲಿ 3,686 ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿದ್ದವು. 2019ರ ಆಗಸ್ಟ್ 5ರ ಬಳಿಕ ಈವರೆಗೆ 438 ಪ್ರಕರಣಗಳಷ್ಟೇ ವರದಿಯಾಗಿವೆ.

ಆದಾಗ್ಯೂ, ಭಯೋತ್ಪಾದಕ ಚಟುವಟಿಕೆಗಳು ಮುಂದುವರಿದಿದ್ದು, 2019ರ ಮೊದಲಿಗೆ ಹೋಲಿಸಿದರೆ ಸಂಖ್ಯೆಯಲ್ಲಿ ಕಡಿಮೆಯಾಗಿದೆ. 2016ರ ಆಗಸ್ಟ್ ತಿಂಗಳಿನಿಂದ 2019ರ ಆಗಸ್ಟ್ ವರೆಗೆ 930 ಭಯೋತ್ಪಾದಕ ಕೃತ್ಯಗಳು ಸಂಭವಿಸಿದ್ದರೆ, ಕಳೆದ ಮೂರು ವರ್ಷಗಳಲ್ಲಿ 617 ಉಗ್ರ ಕೃತ್ಯಗಳು ವರದಿಯಾಗಿವೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದಕ್ಕೂ ಮೊದಲಿನ ಮೂರು ವರ್ಷಗಳಲ್ಲಿ 191 ನಾಗರಿಕರು ಉಗ್ರರ ದಾಳಿಗಳಲ್ಲಿ ಮೃತಪಟ್ಟಿದ್ದರು. ವಿಶೇಷ ಸ್ಥಾನಮಾನ ರದ್ದತಿ ನಂತರದ ಮೂರು ವರ್ಷಗಳಲ್ಲಿ ಭಯೋತ್ಪಾದಕ ದಾಳಿಗಳಲ್ಲಿ 110 ನಾಗರಿಕರು ಮೃತಪಟ್ಟಿದ್ದಾರೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

2016ರ ಆಗಸ್ಟ್‌ನಿಂದ 2019ರ ಆಗಸ್ಟ್ ಅವಧಿಯಲ್ಲಿ 290 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರೆ, 2019ರ ನಂತರ ಈವರೆಗೆ 174 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

2016ರ ಆಗಸ್ಟ್‌ನಿಂದ 2019ರ ಆಗಸ್ಟ್ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಪ್ರಕರಣಗಳ ಸಂದರ್ಭದಲ್ಲಿ ಆರು ಮಂದಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. 2019ರ ಆಗಸ್ಟ್ 5ರ ನಂತರ ಇಂಥ ಒಂದೂ ಪ್ರಕರಣ ವರದಿಯಾಗಿಲ್ಲ.

2019ರ ಆಗಸ್ಟ್ 5ರ ನಂತರ ಭದ್ರತಾ ಪಡೆಗಳು ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹನೆ ನೀತಿ ಅನುಸರಿಸುತ್ತಿವೆ ಎಂದು ಉನ್ನತಮಟ್ಟದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭದ್ರತಾ ಉಪಕರಣಗಳ ಅಳವಡಿಕೆ, ದೇಶ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಬಳಕೆ, ಶೋಧ ಕಾರ್ಯಾಚರಣೆ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಭಯೋತ್ಪಾದಕ ಸಂಘಟನೆಗಳ ಸವಾಲುಗಳನ್ನು ಎದುರಿಸಲು ದಕ್ಷತೆಯಿಂದ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT