ನವದೆಹಲಿ (ಪಿಟಿಐ): ಕೇಂದ್ರದ ನೂತನ 39 ಸಚಿವರು ಕೈಗೊಂಡಿರುವ ಜನಾಶೀರ್ವಾದ ಯಾತ್ರೆಯು ಪ್ರತಿಪಕ್ಷಗಳ ಮುಖಂಡರನ್ನು ವಿಚಲಿತಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಈ ಕುರಿತ ಹೇಳಿಕೆಯಲ್ಲಿ ಅವರು, ‘ಜನರು ಮೋದಿ ಸರ್ಕಾರಕ್ಕೆ ಬೆಂಬಲ ಮತ್ತು ವಿಶ್ವಾಸ ಮುಂದುವರಿಸಿದ್ದಾರೆ. ಇದಕ್ಕೆ ಧಕ್ಕೆಯುಂಟುಮಾಡುವ ವಿರೋಧಪಕ್ಷಗಳ ಮುಖಂಡರ ಯತ್ನ ವಿಫಲವಾಗಿದೆ’ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಗುರಿಯಾಗಿಸಿ ಕ್ರಮಜರುಗಿಸಿರುವ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಇದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಟೀಕಿಸಿದರು.
ಜನಾಶೀರ್ವಾದ ಯಾತ್ರೆ ದೇಶದಾದ್ಯಂತ ಭಾರಿ ಯಶಸ್ಸು ಕಂಡಿದೆ. ಜನರು ಆಗಲೇ ನಕಾರಾತ್ಮಕ ರಾಜಕಾರಣದ ಕಾರ್ಯಸೂಚಿಯನ್ನು ತಿರಸ್ಕರಿಸಿದ್ದಾರೆ. ಆಗಸ್ಟ್ 15 ರಿಂದ 28ರವರೆಗೆ ಯಾತ್ರೆ ನಡೆದಿದ್ದು, 24 ಸಾವಿರ ಕಿ.ಮೀ ಸಂಚರಿಸಿದ್ದು, 5 ಸಾವಿರ ಕಾರ್ಯಕ್ರಮ ಸಂಘಟಿಸಲಾಗಿತ್ತು ಎಂದು ಅವರು ತಿಳಿಸಿದರು.
ಜನಾಶೀರ್ವಾದ ಯಾತ್ರೆಗೆ ದೊರೆತ ಯಶಸ್ಸು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ವ್ಯಕ್ತಪಡಿಸಿರುವ ನಂಬಿಕೆ ಮತ್ತು ವಿಶ್ವಾಸವೂ ಆಗಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.