ಕೆಂಪು ಕೋಟೆ ಹಿಂಸಾಚಾರ: ಜಾಮೀನು ದೊರೆತ ಬೆನ್ನಲ್ಲೇ ದೀಪ್ ಸಿಧು ಮತ್ತೆ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ದಿನ ರೈತರ ಟ್ರಾಕ್ಟರ್ ರ್‍ಯಾಲಿಯ ಸಂದರ್ಭ ದೆಹಲಿಯ ಕೆಂಪು ಕೋಟೆ ಸಂಕೀರ್ಣದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿ ನಟ ಮತ್ತು ಸಾಮಾಜಿಕ ಹೋರಾಟಗಾರ ದೀಪ್ ಸಿಧು ಅವರನ್ನು ದೆಹಲಿ ಪೊಲೀಸ್ ಅಪರಾಧ ದಳ ಶನಿವಾರ ಬಂಧಿಸಿದೆ.
ಸಿಧು ಅವರನ್ನು ಬಂಧಿಸಿರುವ ಬಗ್ಗೆ ‘ಎಎನ್‌ಐ’ ಟ್ವೀಟ್ ಮಾಡಿದೆ.
Crime Branch of Delhi Police arrests Deep Sidhu, an accused in the 26th January violence case.
He was granted bail by a Delhi Court earlier today.
(File photo) pic.twitter.com/C1RFIaANX8
— ANI (@ANI) April 17, 2021
ಬಂಧನವಾಗುವುದಕ್ಕೂ ಕೆಲವೇ ಗಂಟೆಗಳ ಮೊದಲು ಸಿಧುಗೆ ದೆಹಲಿಯ ನ್ಯಾಯಾಲಯ ಜಾಮೀನು ನೀಡಿತ್ತು. ಇಬ್ಬರು ವ್ಯಕ್ತಿಗಳಿಂದ ವೈಯಕ್ತಿಕ ಬಾಂಡ್, ತಲಾ ₹ 30,000 ಶ್ಯೂರಿಟಿ ಪಡೆದು ದೆಹಲಿ ಕೋರ್ಟ್ ಜಾಮೀನು ನೀಡಿತ್ತು. ಪಾಸ್ ಪೋರ್ಟ್ ಒಪ್ಪಿಸುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಲಾಗಿತ್ತು.
ಓದಿ: ಗಣರಾಜ್ಯೋತ್ಸವ ದಿನದ ಘರ್ಷಣೆ: ಆರೋಪಿ ದೀಪ್ ಸಿಧುಗೆ ಜಾಮೀನು
ಸಿಧು ಅವರನ್ನು ಫೆಬ್ರವರಿ 9ರಂದು ಹರಿಯಾಣದ ಕರ್ನಾಲ್‌ನಲ್ಲಿ ಬಂಧಿಸಲಾಗಿತ್ತು. ಮೂರು ಕೃಷಿ ಕಾನೂನುಗಳ ವಿರುದ್ಧ ತಾವು ನಡೆಸುತ್ತಿರುವ ಪ್ರತಿಭಟನೆಯ ದಾರಿ ತಪ್ಪಿಸಲು ದೀಪ್ ಸಿಧು ಯತ್ನಿಸಿದ್ದಾರೆ ಎಂದು ರೈತರು ಆರೋಪಿಸಿದ್ದರು.
ಜನವರಿ 26ರಂದು ಪ್ರತಿಭಟನಾಕಾರರು ಟ್ರ್ಯಾಕ್ಟರ್ ರ್‍ಯಾಲಿಗೆ ತಾವು ಒಪ್ಪಿದ ಮಾರ್ಗಗಳನ್ನು ಬಿಟ್ಟು ದೆಹಲಿ ಪ್ರವೇಶಿಸಿದ್ದರು. ಕೆಂಪು ಕೋಟೆಗೆ ನುಗ್ಗಿ ದಾಂಧಲೆ ಮಾಡಿದ್ದರು. ರೈತರನ್ನು ದಾರಿ ತಪ್ಪಿಸಿ ಕೆಂಪುಕೋಟೆ ಕಡೆಗೆ ಕರೆದೊಯ್ದು ಘರ್ಷಣೆಗೆ ಕಾರಣವಾದ ಆರೋಪ ದೀಪ್ ಸಿಧು ಅವರ ಮೇಲಿದೆ. ಪದೇ ಪದೇ ಮನವಿ ಮಾಡಿದರೂ ಬಗ್ಗದ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರಿಂದ ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಚಾರ್ಜ್ ಮಾಡಿದ್ದರು.
ಜನವರಿ 26 ರಂದು ನಡೆದ ಹಿಂಸಾಚಾರದಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.