ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್‌ನಿಂದ ಕೆ.ವಿ.ಥಾಮಸ್ ಉಚ್ಚಾಟನೆ

ಪಕ್ಷದಿಂದ ಉಚ್ಚಾಟಿಸಿದ ಕುರಿತು ಮಾಹಿತಿ ಸಿಕ್ಕಿಲ್ಲ: ಥಾಮಸ್
Last Updated 13 ಮೇ 2022, 11:10 IST
ಅಕ್ಷರ ಗಾತ್ರ

ಕೊಚ್ಚಿ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಕೆ.ವಿ.ಥಾಮಸ್ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಥಾಮಸ್,‘ಪಕ್ಷದಿಂದ ಉಚ್ಚಾಟಿಸಿರುವ ಕುರಿತ ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ನಾನು ಈಗಲೂ ಎಐಸಿಸಿ ಮತ್ತು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಸದಸ್ಯನಾಗಿದ್ದೇನೆ’ ಎಂದು ಹೇಳಿದ್ದಾರೆ.

‘ನನ್ನ ಮಟ್ಟಿಗೆ ಕಾಂಗ್ರೆಸ್ ಎಂಬುದು ಚಿಂತನಾಕ್ರಮ, ಸಂಸ್ಕೃತಿ, ಭಾವನೆ. ಅದನ್ನು ಬದಲಿಸಲುಹೇಗೆ ಸಾಧ್ಯ. ಹೆಚ್ಚೆಂದರೆ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆಯಬಹುದು ಅಷ್ಟೇ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೆ.ವಿ.ಥಾಮಸ್ ಹೆಸರಿನಲ್ಲಿ ಹಲವರು ಇದ್ದಾರೆ. ಕಾಂಗ್ರೆಸ್‌ನ ಕೇರಳ ಘಟಕದ ಅಧ್ಯಕ್ಷ ಕೆ.ಸುಧಾಕರನ್ ಅವರು, ಅಚಾತುರ್ಯದಿಂದ ತಮ್ಮನ್ನು ಉಚ್ಚಾಟನೆ ಮಾಡಿರಬಹುದು ಎಂದು ಅವರು ಲೇವಡಿ ಮಾಡಿದರು.

'ನಾಯಕರೊಬ್ಬರನ್ನು ಪಕ್ಷದಿಂದ ಉಚ್ಚಾಟಿಸಲು ಒಂದು ವ್ಯವಸ್ಥೆಯಿದೆ. ಈ ಕುರಿತು ಎಐಸಿಸಿ ಕ್ರಮ ಕೈಗೊಳ್ಳಬೇಕು. ನಾನು ಈಗಲೂ ಕೆಪಿಸಿಸಿ(ಕೇರಳ ಕಾಂಗ್ರೆಸ್ ಘಟಕ) ಮತ್ತು ಎಐಸಿಸಿಯ ಸದಸ್ಯನಾಗಿದ್ದೇನೆ. ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಕೆಲವು ನಾಯಕರು ತಾವೇ ಪಕ್ಷ ಎಂಬಂತೆ ವರ್ತಿಸುತ್ತಿದ್ದಾರೆ. ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂಬುದು ಹಾಸ್ಯವಷ್ಟೇ' ಎಂದು ಹೇಳಿದ್ದಾರೆ.

ತಾವು ಸಿಪಿಐ(ಎಂ) ಅಥವಾ ಯಾವುದೇ ಪಕ್ಷವನ್ನು ಸೇರುವುದಿಲ್ಲ. ಕಾಂಗ್ರೆಸ್ಸಿಗನಾಗಿಯೇ ಉಳಿಯುತ್ತೇನೆ ಎಂದು ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ಎಐಸಿಸಿ ಮಾತ್ರವೇ ಕ್ರಮ ಕೈಗೊಳ್ಳಬಹುದು ಎಂದು ಥಾಮಸ್ ನೀಡಿರುವ ಹೇಳಿಕೆಯನ್ನು ಅಲ್ಲಗಳೆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, 'ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕ್ರಮಕೈಗೊಳ್ಳಲು ಕಾಂಗ್ರೆಸ್ ರಾಜ್ಯ ಘಟಕಗಳಿಗೆ ಅಧಿಕಾರವಿದೆ. ಕಾಂಗ್ರೆಸ್ ಬ್ಯಾನರ್ ಇಲ್ಲದೆ ತಾವು ಶೂನ್ಯ ಎಂಬುದು ಮಾಜಿ ಸಚಿವರಿಗೆ(ಥಾಮಸ್ ಅವರನ್ನು ಉದ್ದೇಶಿಸಿ) ಶೀಘ್ರವೇ ತಿಳಿಯಲಿದೆ' ಎಂದು ಹೇಳಿದ್ದಾರೆ.

ಕೊಚ್ಚಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಥಾಮಸ್ ಅವರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ವೇದಿಕೆ ಹಂಚಿಕೊಂಡಿದ್ದ ಕಾರಣಕ್ಕೆ, ಗುರುವಾರ ರಾತ್ರಿ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT