ಕಾನ್ಪುರ (ಉತ್ತರ ಪ್ರದೇಶ): ಭೂಗತ ಪಾತಕಿ ಛೋಟಾರಾಜನ್ ಮತ್ತು ಹತನಾಗಿರುವ ಗ್ಯಾಂಗ್‌ಸ್ಟರ್ ಮುನ್ನಾ ಭಜರಂಗಿ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಅಂಚೆ ವಿಭಾಗ ತನಿಖೆಗೆ ಆದೇಶಿಸಿದೆ.
‘ಮೈ ಸ್ಟಾಂಪ್‘ ಯೋಜನೆಯಡಿ ರಾಜನ್ ಮತ್ತು ಭಜರಂಗಿಯ ಫೋಟೊಗಳಿರುವ ತಲಾ 12 ಅಂಚೆ ಚೀಟಿಗಳನ್ನು ಕೆಲವು ವರ್ಷಗಳ ಹಿಂದೆ ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ‘ಮೈ ಸ್ಟಾಂಪ್‘ ಯೋಜನೆ ನಿರ್ವಹಿಸುವ ವಿಭಾಗದ ಲೋಪದಿಂದಾಗಿ ಇಂಥ ಘಟನೆ ನಡೆದಿದೆ‘ ಎಂದು ಹೇಳಿರುವ ಪೋಸ್ಟ್‌ಮಾಸ್ಟರ್ ಜನರಲ್ ವಿ.ಕೆ.ವರ್ಮಾ, ‘ಈ ಕುರಿತು ತನಿಖೆಗೆ ಆದೇಶಿಸಲಾಗಿದೆ‘ ಎಂದು ತಿಳಿಸಿದರು.
ಅಪರಿಚಿತ ವ್ಯಕ್ತಿಯೊಬ್ಬ ₹5 ಮೌಲ್ಯದ, ₹600 ಮೊತ್ತ ನೀಡಿ ಇಲಾಖೆಯಿಂದ ವೈಯಕ್ತಿಕ ಫೋಟೊಗಳನ್ನು ಮುದ್ರಿಸಿದ ಅಂಚೆ ಚೀಟಿಗಳನ್ನು ಖರೀದಿಸಿದ್ದಾನೆ. ಅಗತ್ಯವಿರುವ ಗುರುತಿನ ಚೀಟಿಯ ಪುರಾವೆಗಳಿಲ್ಲದೇ ವ್ಯಕ್ತಿಯೊಬ್ಬ ‘ಮೈ ಸ್ಟಾಂಪ್‘ ಯೋಜನೆಯಡಿ ಫೋಟೊ ಸಹಿತ ಅಂಚೆ ಚೀಟಿಯನ್ನು ಖರೀದಿಸಿದ್ದಾನೆ. ಅದನ್ನು ಇಲಾಖೆ ಬಿಡುಗಡೆ ಮಾಡಿದೆ.
‘ಈ ವಿಚಾರದಲ್ಲಿ ತಪ್ಪಿತಸ್ಥರಾಗಿರುವ ಅಂಚೆ ಚೀಟಿ ವಿಭಾಗದ ಉಸ್ತುವಾರಿ ರಜನೀಶ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ‘ ಎಂದ ವರ್ಮಾ, ‘ಕೆಲವು ನೌಕರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದೇವೆ‘ ಎಂದು ಅವರು ತಿಳಿಸಿದ್ದಾರೆ.
‘ಇಂತಹ ದೋಷಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಭವಿಷ್ಯದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ‘ ಎಂದು ವರ್ಮಾ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.