ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಅಧಿಕಾರಿಗಳ ವಿರುದ್ಧ ಸ್ಪೀಕರ್‌ಗೆ ದೂರು ನೀಡಿದ ಸಂಸದ ಕಾರ್ತಿ ಚಿದಂಬರಂ

ಸಿಬಿಐನಿಂದ ಗೋಪ್ಯ, ಸ್ಥಾಯಿ ಸಮಿತಿಯ ಪತ್ರಗಳು ವಶಕ್ಕೆ ಆರೋಪ
Last Updated 27 ಮೇ 2022, 11:17 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ತಮಗಿರುವ ಸಂಸದೀಯ ವಿಶೇಷಾಧಿಕಾರವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಕಾರ್ತಿ ಚಿದಂಬರಂ ಅವರ ತಂದೆ ಪಿ.ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದ ವೇಳೆ ಚೀನಾದ 263 ಮಂದಿಗೆ ವೀಸಾ ನೀಡುವ ವೇಳೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಸಂಬಂಧ ಕಾರ್ತಿ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿರುವ ನಡುವೆಯೇ, ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾರ್ತಿ ಅವರುಈ ಪತ್ರ ಬರೆದಿದ್ದಾರೆ.

ತಮ್ಮ ನಿವಾಸದ ಮೇಲೆ ದಾಳಿ ಮಾಡಿರುವ ಸಿಬಿಐ,ಮಾಹಿತಿ ಮತ್ತು ತಂತ್ರಜ್ಞಾನ ಕುರಿತಾದ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಪತ್ರಗಳು ಹಾಗೂ ಗೋಪ್ಯದ ವೈಯಕ್ತಿಕ ನೋಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ಸಂಸದೀಯ ವಿಶೇಷಾಧಿಕಾರವನ್ನು ಉಲ್ಲಂಘನೆ ಮಾಡಿದ್ದಾರೆ ಎಂದಿದ್ದಾರೆ.

ಹಾಲಿ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ತಮ್ಮ ಮತ್ತು ತಮ್ಮ ಕುಟುಂಬವನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದೆ. ಅಲ್ಲದೆ, ಒಂದರ ಹಿಂದೆ ಮತ್ತೊಂದು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವ ತನಿಖಾ ಸಂಸ್ಥೆಗಳು, ಭಿನ್ನ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿವೆ. ಈ ರೀತಿಯಾಗಿ ಗುರಿಯಾಗಿಸಿಕೊಳ್ಳುವುದು ಸಂಸದರಿಗೆ ಇರುವ ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣ: 2ನೇ ದಿನವೂ ಸಿಬಿಐ ವಿಚಾರಣೆ ಎದುರಿಸಿದ ಕಾರ್ತಿ ಚಿದಂಬರಂ

2011ರಲ್ಲಿ ಪಿ.ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದ ವೇಳೆ 263 ಚೀನಾದ ಕೆಲಸಗಾರರಿಗೆ ವೀಸಾ ನೀಡಿಕೆಯಲ್ಲಿಭ್ರಷ್ಟಾಚಾರ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ಸಂಸದ ಕಾರ್ತಿ ಚಿದಂಬರಂ ಅವರು 2ನೇ ದಿನವಾದ ಶುಕ್ರವಾರವೂ ಸಿಬಿಐ ವಿಚಾರಣೆಗೆ ಹಾಜರಾದರು.

ಆಗ ಪಂಜಾಬ್‌ನಲ್ಲಿ ವಿದ್ಯುತ್ ಘಟಕ ಆರಂಭಿಸುತ್ತಿದ್ದ ವೇದಾಂತ ಕಂಪನಿಯ ತಲ್ವಾಂಡಿ ಸಬೊ ಪವರ್ ಲಿ.(ಟಿಎಸ್‌ಪಿಎಲ್‌)ನ ಹಿರಿಯ ಅಧಿಕಾರಿಗಳು, ಚೀನಾದ 263 ನೌಕರರಿಗೆ ಯೋಜನೆ ವೀಸಾ ಪಡೆಯಲು ಕಾರ್ತಿ ಚಿದಂಬರಂ ಹಾಗೂ ಅವರ ಆತ್ಮೀಯರಾಗಿದ್ದ ಎಸ್. ಬಾಲಕೃಷ್ಣ ಅವರಿಗೆ ₹50 ಲಕ್ಷ ಲಂಚ ನೀಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಈ ಪ್ರಕರಣದಲ್ಲಿ ಬಾಲಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ.

ಆದರೆ, ಈ ಆರೋಪವನ್ನು ತಿರಸ್ಕರಿಸಿರುವ ಸಂಸದ ಕಾರ್ತಿ ಚಿದಂಬರಂ ಅವರು, ಈ ಪ್ರಕರಣ ಸೇಡಿನ ರಾಜಕಾರಣವಷ್ಟೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT