ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಜಲ ಮಂಡಳಿ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ: ಕೇಜ್ರಿವಾಲ್ ಆಕ್ರೋಶ

Last Updated 24 ಡಿಸೆಂಬರ್ 2020, 14:12 IST
ಅಕ್ಷರ ಗಾತ್ರ

ನವದೆಹಲಿ: ಆಮ್‌ ಆದ್ಮಿ ಪಕ್ಷವು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ದೆಹಲಿ ಜಲ ಮಂಡಳಿಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎಪಿ ಮುಖಂಡ ರಾಘವ್‌ ಛಡ್ಡಾ ಆರೋಪಿಸಿದ್ದಾರೆ.

ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ರಾಘವ್‌ ಛಡ್ಡಾ ಗುರುವಾರ 'ವಿಡಿಯೊ ಟ್ವೀಟ್‌' ಮಾಡುವ ಮೂಲಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಬಿಜೆಪಿ ಗೂಂಡಾಗಳು ದೆಹಲಿ ಜಲಮಂಡಳಿಯ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಕಚೇರಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ' ಎಂದು ಛಡ್ಡಾ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, 'ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿ ಕಚೇರಿಗೆ ಪ್ರವೇಶಿಸಿ ಅದನ್ನು ಧ್ವಂಸ ಮಾಡಿದರು. ರೈತರಿಗೆ ಬೆಂಬಲ ನೀಡಿರುವ ಎಎಪಿ ನಾಯಕರು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದರು. ಇದೆಲ್ಲವೂ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ದೆಹಲಿ ಪೊಲೀಸರ ಸಹಾಯದಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟವಾಗಿದೆ' ಎಂದು ಆರೋಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಗುರುವಾರ ಸಂಜೆ ಟ್ವೀಟ್‌ ಮಾಡಿರುವ ಅವರು, 'ನಮ್ಮ ಕೊನೆಯ ಉಸಿರಿನವರೆಗೂ ರೈತರೊಂದಿಗೆ ನಾವು ನಿಲ್ಲಲಿದ್ದೇವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ದಾಳಿಯಿಂದ ಎಎಪಿ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ರೈತರಿಗೆ ಬೆಂಬಲ ಸೂಚಿಸುತ್ತೇನೆ' ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT