ಚಿನ್ನ ಕಳ್ಳ ಸಾಗಣೆ: ಕೇರಳ ಸಿಎಂ ಹೆಚ್ಚುವರಿ ಆಪ್ತ ಕಾರ್ಯದರ್ಶಿಗೆ ಇ.ಡಿ. ಸಮನ್ಸ್

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಮೂರನೇ ಬಾರಿ ಸಮನ್ಸ್ ನೀಡಿದೆ.
ರಾಜತಾಂತ್ರಿಕ ಮಾರ್ಗವನ್ನು ದುರುಪಯೋಗಪಡಿಸಿಕೊಂಡು ಚಿನ್ನ ಕಳ್ಳ ಸಾಗಣೆ ಮಾಡಿದವರ ಜೊತೆ ನಂಟು ಹೊಂದಿರುವ ಆರೋಪದಡಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತಾಗಿದ್ದರು. ಅವರು ವಿಚಾರಣೆ ವೇಳೆ ಕೆಲ ಮಾಹಿತಿಗಳನ್ನು ಬಾಯ್ಬಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ರವೀಂದ್ರನ್ ಅವರನ್ನು ವಿಚಾರಣೆಗೊಳಪಡಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿತ್ತು. ಹೀಗಾಗಿ ಹೋದ ತಿಂಗಳು ಎರಡು ಬಾರಿ ಸಮನ್ಸ್ ಕೂಡ ನೀಡಿತ್ತು. ಕೊರೊನಾ ಸೋಂಕು ತಗುಲಿದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ರವೀಂದ್ರನ್ ವಿಚಾರಣೆಗೆ ಗೈರಾಗಿದ್ದರು.
ಮುಖ್ಯಮಂತ್ರಿ ಹಾಗೂ ಹಲವು ಸಿಪಿಎಂ ಮುಖಂಡರಿಗೆ ರವೀಂದ್ರನ್ ಆಪ್ತರಾಗಿದ್ದಾರೆ. ಇ.ಡಿ, ಈಗಾಗಲೇ ರವೀಂದ್ರನ್ ಹಾಗೂ ಅವರ ಕುಟುಂಬದವರ ಆದಾಯ ಹಾಗೂ ಹೂಡಿಕೆ ಬಗ್ಗೆ ಮಾಹಿತಿ ಕಲೆಹಾಕಿದೆ. ಡಿಸೆಂಬರ್ 10ರಂದು ವಿಚಾರಣೆಗೆ ಬರುವಂತೆ ಸೂಚಿಸಿದೆ. ಅಂದಿನ ವಿಚಾರಣೆಯ ವೇಳೆ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.