ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: 'ವರದಕ್ಷಿಣೆ ಪಡೆದಿಲ್ಲ' ಪ್ರಮಾಣಪತ್ರ ಸಲ್ಲಿಸಲು ಸರ್ಕಾರಿ ನೌಕರರಿಗೆ ಸೂಚನೆ

ವರದಕ್ಷಿಣೆ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸುತ್ತೋಲೆ
Last Updated 23 ಜುಲೈ 2021, 11:39 IST
ಅಕ್ಷರ ಗಾತ್ರ

ತಿರುವನಂತಪುರ: ವರದಕ್ಷಿಣೆಯನ್ನು ತಡೆಗಟ್ಟುವ ಕ್ರಮದ ಭಾಗವಾಗಿ ಕೇರಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು, ಸರ್ಕಾರಿ ನೌಕರರಿಗೆ ವರದಕ್ಷಿಣೆ ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ಅಫಿಡ್‌ವಿಟ್ (ಪ್ರಮಾಣಪತ್ರ) ಸಲ್ಲಿಸಲು ಸೂಚಿಸಿದೆ.

ಕೇರಳದಲ್ಲಿ ಇತ್ತೀಚೆಗೆ ವರದಕ್ಷಿಣೆ ಸಾವು ಮತ್ತು ಕಿರುಕುಳಗಳು ನಡೆದಿದ್ದು, ಇದರಲ್ಲಿ ಸರ್ಕಾರಿ ನೌಕರರು ಸಹ ಆರೋಪಿಯಾಗಿದ್ದಾರೆ. ಹಾಗಾಗಿ, ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.

ಕೇರಳದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಈ ಕಾಯ್ದೆಯ ಅನ್ವಯ ಸರ್ಕಾರಿ ನೌಕರರಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ‘ವರದಕ್ಷಿಣೆ ಪಡೆಯುವುದು ಮತ್ತು ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರಿ ನೌಕರರು ಭಾಗಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮದುವೆಯಾಗಿರುವ ಪುರುಷ ಸರ್ಕಾರಿ ನೌಕರರು ಒಂದು ತಿಂಗಳ ಅವಧಿಯೊಳಗೆ ತಾವು ವರದಕ್ಷಿಣೆ ಪಡೆದಿಲ್ಲ ಎನ್ನುವ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು. ಈ ಪತ್ರಕ್ಕೆ ನೌಕರನ ಹೆಂಡತಿ, ತಂದೆ–ತಾಯಿ ಮತ್ತು ಅತ್ತೆ–ಮಾವ ಸಹಿ ಹಾಕಬೇಕು. ಈ ಬಗ್ಗೆ ಇಲಾಖೆಯ ಮುಖ್ಯಸ್ಥರು, ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿಗೆ ಅರ್ಧವಾರ್ಷಿಕ ವರದಿ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.

ವರದಕ್ಷಿಣೆ ವಿರುದ್ಧ ಜಾಗೃತಿ ಮೂಡಿಸಲು ಈಚೆಗಷ್ಟೇ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಅವರು ವಿವಿಧ ಗಾಂಧಿಪರ ಸಂಘಟನೆಗಳ ಜತೆಗೂಡಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT