ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸರ್ಕಾರದ ತನಿಖಾ ಆಯೋಗಕ್ಕೆ ಹೈಕೋರ್ಟ್‌ ತಡೆ

ಪಿಣರಾಯಿ ವಿಜಯನ್ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆ
Last Updated 11 ಆಗಸ್ಟ್ 2021, 15:06 IST
ಅಕ್ಷರ ಗಾತ್ರ

ಕೊಚ್ಚಿ/ ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಿಲುಕಿಸಲು ಜಾರಿ ನಿರ್ದೇಶನಾಲಯ (ಇಡಿ) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ, ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರ ರಚಿಸಿದ್ದ ತನಿಖಾ ಆಯೋಗಕ್ಕೆ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಯುಎಇ ಕಾನ್ಸುಲೇಟ್‌ ಕಚೇರಿಯ ಅಧಿಕಾರಿಗಳು ಭಾಗಿಯಾಗಿರುವ ಆರೋಪದ ಈ ಪ್ರಕರಣದಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ತೀವ್ರ ಹಿನ್ನೆಡೆ ಉಂಟಾಗಿದೆ.

‘ಇಂತಹ ವಿಷಯಗಳಲ್ಲಿ ಪರ್ಯಾಯ ವಿಚಾರಣೆಗಳನ್ನು ನಡೆಸಿದರೆ, ಅದು ತನಿಖೆಗೆ ಅಡ್ಡಿಯಾಗುತ್ತದೆ ಮತ್ತು ಪ್ರಕರಣದ ತನಿಖೆ ಹಳಿ ತಪ್ಪುತ್ತದೆ. ಅಲ್ಲದೆ, ಅದು ಆರೋಪಿಗಳಿಗೆ ಪ್ರಯೋಜನವಾಗುತ್ತದೆ’ ಎಂದು ಹೈಕೋರ್ಟ್‌ ಹೇಳಿದೆ. ‌

ಚಿನ್ನ ಕಳ್ಳಸಾಗಣೆ ಆರೋಪಿ ಮತ್ತು ಯುಎಇ ಕಾನ್ಸುಲೇಟ್‌ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ವೇಳೆ ಮುಖ್ಯಮಂತ್ರಿ ಸೂಚನೆಯಂತೆ ಚಿನ್ನ ಹಾಗೂ ಡಾಲರ್ ಕಳ್ಳಸಾಗಣೆ ಮಾಡಿರುವುದಾಗಿ ಬಲವಂತದ ಹೇಳಿಕೆ ಕೊಡಿಸಿದ್ದಾರೆ ಎಂದು ನೀಡಿದ ಹೇಳಿಕೆ ಸಂಬಂಧ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರ ತನಿಖಾ ಆಯೋಗ ರಚಿಸಿತ್ತು. ಈ ಸಂಬಂಧ ಮೇ 7ರಂದು ಹೊರಡಿಸಿದ್ದ ಅಧಿಸೂಚನೆಗೆ ತಡೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಅರ್ಜಿಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ. ಸುರೇಶ್‌ ಕುಮಾರ್‌, ಸರ್ಕಾರದ ಅಧಿಸೂಚನೆಗೆ ತಡೆ ನೀಡಿ, ಮಧ್ಯಂತರ ಆದೇಶ ಹೊರಡಿಸಿದರು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ‘ಸಂವಿಧಾನದ ಏಳನೇ ಪರಿಚ್ಛೇದದ ಅನ್ವಯ ಇದು ಕೇಂದ್ರ ಪಟ್ಟಿಯಲ್ಲಿ ಬರುವ ವಿಷಯ. ಇದನ್ನು ರಾಜ್ಯ ಸರ್ಕಾರ ತನಿಖೆ ನಡೆಸುವುದು ಸಮರ್ಥನೀಯವಲ್ಲ’ ಎಂದು ವಾದಿಸಿದರು.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಹೇಳಿಕೆ ನೀಡುವಂತೆ ಬಲವಂತಪಡಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸರು ದಾಖಲಿಸಿದ್ದ ಎರಡು ಎಫ್‌ಐಆರ್‌ಗಳನ್ನು ಕೇರಳ ಹೈಕೋರ್ಟ್‌ ಈ ಮೊದಲು ರದ್ದುಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT