ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಸ್ಥಳೀಯ ಸಂಸ್ಥೆ: ಎಲ್‌ಡಿಎಫ್ ಹಿಡಿತ

ಯುಡಿಎಫ್‌ಗೆ ಭಾರಿ ಹಿನ್ನಡೆ; ಬಿಜೆಪಿ ಯಥಾಸ್ಥಿತಿ
Last Updated 16 ಡಿಸೆಂಬರ್ 2020, 20:28 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. 1,199 ಸ್ಥಳೀಯ ಸಂಸ್ಥೆಗಳ ಪೈಕಿ 670ರಲ್ಲಿ ತನ್ನ ಛಾಪು ಮೂಡಿಸಿದೆ.

ತಿರುವನಂತಪುರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಕನಸು ಈಡೇರಿಲ್ಲ. ಪಕ್ಷಕ್ಕೆ ಈ ಚುನಾವಣೆಯಲ್ಲಿ ಮಹತ್ವದ ಸಾಧನೆ ಸಾಧ್ಯವಾಗಿಲ್ಲ. ಈ ನಡುವೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ತೀವ್ರ ಹಿನ್ನಡೆ ಅನುಭವಿಸಿದೆ.

ಹಲವು ಕಡೆ ಯುಡಿಎಫ್‌ ಹಾಗೂಎಲ್‌ಡಿಎಫ್‌ ನಡುವಿನ ಹೊಂದಾಣಿಕೆಯಿಂದ ಎನ್‌ಡಿಎ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

‘ಸ್ಥಳೀಯ ಅಂಶಗಳ ಕಾರಣ ಎಡರಂಗಕ್ಕೆ ಮುನ್ನಡೆಯಾಗಿದೆ. ಇದು ಸರ್ಕಾರಕ್ಕೆ ಸಿಕ್ಕಿರುವ ಜನಾದೇಶವಲ್ಲ’ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ರಾಜ್ಯದ ಆರು ಪಾಲಿಕೆಗಳ ಪೈಕಿ ಐದರಲ್ಲಿ ಎಲ್‌ಡಿಎಫ್‌ಗೆ ಬಹುಮತ ಸಿಕ್ಕಿದೆ. ಕಣ್ಣೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ. ತಿರುವನಂತಪುರ ಪಾಲಿಕೆಯಲ್ಲಿ 2010ರಲ್ಲಿ ಆರು ಸ್ಥಾನ ಗಳಿಸಿದ್ದ ಬಿಜೆಪಿ, 2015ರಲ್ಲಿ ಅದನ್ನು 34ಕ್ಕೆ ಏರಿಸಿಕೊಂಡಿತ್ತು. ಈ ಬಾರಿಯೂ ಅಷ್ಟೇ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 100 ಸದಸ್ಯಬಲದ ಪಾಲಿಕೆಯಲ್ಲಿ ಕಳೆದ ಬಾರಿ ಬಹುಮತಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದ್ದ ಎಲ್‌ಡಿಎಫ್ ಈ ಬಾರಿ 51 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಯುಡಿಎಫ್‌ 21ರಿಂದ 10ಕ್ಕೆ ಕುಸಿತ ಕಂಡಿದೆ.

ಮುಂದಿನ ಐದು ತಿಂಗಳಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹಾಗಾಗಿ, ಈಗಿನ ಗೆಲುವು ಎಲ್‌ಡಿಎಫ್‌ಗೆ ಹುಮ್ಮಸ್ಸು ತುಂಬಿದೆ. ಆದರೆ, ಸಾಲು ಸಾಲು ವಿವಾದಗಳು ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರದ ಬೆನ್ನು ಹತ್ತಿವೆ.

ಎಡರಂಗದ ಮೇಲುಗೈ
86 ಪುರಸಭೆಗಳ ಪೈಕಿ ಯುಡಿಎಫ್‌ 45ರಲ್ಲಿ, ಎಲ್‌ಡಿಎಫ್ 35ರಲ್ಲಿ ಗೆಲುವು ದಾಖಲಿಸಿವೆ. ಪಾಲಕ್ಕಾಡ್‌ ಪುರಸಭೆಯನ್ನು ಉಳಿಸಿಕೊಂಡಿರುವ ಬಿಜೆಪಿ, ಪತ್ತನಂತಿಟ್ಟ ಜಿಲ್ಲೆಯ ಪಂದಲಂನಲ್ಲಿ ಮುನ್ನಡೆಯಲ್ಲಿದೆ. ಬಹುಶಃ ಶಬರಿಮಲೆ ಅಯ್ಯಪ್ಪ ದೇಗುಲ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿಲುವುಗಳು ಇಲ್ಲಿ ಪ್ರತಿಫಲನವಾಗಿವೆ.

14 ಜಿಲ್ಲಾ ಪಂಚಾಯಿತಿಗಳಲ್ಲಿ 10ರಲ್ಲಿ ಎಲ್‌ಡಿಎಫ್ ಮೇಲುಗೈ ಸಾಧಿಸಿದೆ. 152 ತಾಲ್ಲೂಕು (ಬ್ಲಾಕ್) ಪಂಚಾಯಿತಿಗಳಲ್ಲಿ ಎಲ್‌ಡಿಎಫ್ 108ರಲ್ಲಿ ಬಹುಮತ ಪಡೆದಿದೆ. ಇಲ್ಲಿ ಯುಡಿಎಫ್‌ಗೆ ಸಿಕ್ಕಿದ್ದು 44 ಮಾತ್ರ.

ಗ್ರಾಮ ಪಂಚಾಯಿತಿಯಲ್ಲೂ ಆಡಳಿತಾರೂಢ ಪಕ್ಷ ಮೇಲುಗೈ ಸಾಧಿಸಿದೆ. 941 ಪಂಚಾಯಿತಿಗಳ ಪೈಕಿ 514ನ್ನು ಮೈತ್ರಿಕೂಟ ಗೆದ್ದುಕೊಂಡಿದೆ. ಇಲ್ಲಿ ಯುಡಿಎಫ್ 377 ಮತ್ತು ಎನ್‌ಡಿಎ 22ರಲ್ಲಿ ಗೆಲುವು ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT