ಶುಕ್ರವಾರ, ಡಿಸೆಂಬರ್ 3, 2021
24 °C

ಕೇರಳದಲ್ಲಿ ಮನಕಲಕುವ ದೃಶ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ-ಮಗು ಮೃತದೇಹ ಪತ್ತೆ

ಅರ್ಜುನ್ ರಘುನಾಥ್ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತ ಹಲವು ಮಂದಿಯ ದಾರುಣ ಸಾವಿಗೆ ಕಾರಣವಾಗಿದೆ. ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳ ಭೂಕುಸಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ತೆರವು ಕಾರ್ಯಾಚರಣೆ ವೇಳೆ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದಿವೆ.

ತಾಯಿ ಮತ್ತು ಮಗುವಿನ ಮೃತದೇಹ ಪರಸ್ಪರ ತಬ್ಬಿಕೊಂಡಿರುವ ಸ್ಥಿತಿಯಲ್ಲೇ ಪತ್ತೆಯಾಗಿದೆ. ಮತ್ತೊಂದು ಕಂದಮ್ಮ ತೊಟ್ಟಿಲಿನಲ್ಲಿ ನಿದ್ರಿಸುತ್ತಿರುವಾಗಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಪತ್ತಿನಿಂದಾಗಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಹತ್ತಾರು ಮಂದಿ ಕಣ್ಮರೆಯಾಗಿದ್ದಾರೆ.

ಓದಿ: 

ಕೋಟಯಂನ ಕೂಟ್ಟಿಕ್ಕಲ್ ಎಂಬಲ್ಲಿ ಎರಡು ಕಡೆ ಭೂಕುಸಿತ ಪ್ರದೇಶಗಳಿಂದ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ 12 ಮಂದಿಯ ಮೃತದೇಹವನ್ನು ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ.

ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್‌ನಲ್ಲಿ ತಾಯಿ–ಇಬ್ಬರು ಮಕ್ಕಳು ಸೇರಿದಂತೆ ಆರು ಮೃತದೇಹಗಳು ಪತ್ತೆಯಾಗಿವೆ. ಒಬ್ಬ ಮಹಿಳೆ ಹಾಗೂ ಮಗು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಶ್ವಾನಗಳನ್ನೂ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದೆ. ಸಂಜೆ ವೇಳೆಗೆ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ.

ಕೇರಳದ ಕೇಂದ್ರ ಹಾಗೂ ದಕ್ಷಿಣ ಭಾಗಗಳಲ್ಲಿ ಭಾನುವಾರ ಮಳೆ ತುಸು ಕಡಿಮೆಯಾಗಿದ್ದರೂ ಬುಧವಾರದಿಂದ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಕಟ್ಟೆಚ್ಚರ ಘೋಷಿಸಲಾಗಿದೆ.

ಪಾಲಕ್ಕಾಡ್‌ ಜಿಲ್ಲೆಯಲ್ಲಿಯೂ ಭಾರಿ ಮಳೆಯಾಗಿದೆ.

ಕೋಟಯಂ ಮತ್ತು ಪತ್ತನಂತಿಟ್ಟ ಜಿಲ್ಲೆಯಲ್ಲಿ ಪ್ರವಾಹ ಇಳಿಕೆಯಾಗಿದ್ದರೂ ಅನೇಕ ಪ್ರದೇಶಗಳು ಜಲಾವೃತವಾಗಿಯೇ ಇವೆ. ಆ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಓದಿ: 

ರಾಜ್ಯದ ಇತರ ಹಲವು ಕಡೆಗಳಲ್ಲಿಯೂ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಕೋಯಿಕ್ಕೋಡ್‌ನಲ್ಲಿ ಒಂದು ವರ್ಷದ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ತಿರುವನಂತಪುರದಲ್ಲಿ ವಲಸೆ ಕಾರ್ಮಿಕರೊಬ್ಬರು ನಾಪತ್ತೆಯಾಗಿದ್ದಾರೆ.

ಕೂಟ್ಟಿಕ್ಕಲ್ ಮತ್ತು ಕೊಕ್ಕಯಾರ್‌ನ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಭಾನುವಾರ ಬೆಳಿಗ್ಗೆ ಶೋಧ ಕಾರ್ಯ ಚುರುಕುಗೊಂಡಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಮತ್ತು ಸೇನಾ ಸಿಬ್ಬಂದಿ ಶನಿವಾರ ರಾತ್ರಿ ಸ್ಥಳಕ್ಕೆ ಧಾವಿಸಿದ್ದರು.

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ.

ರಾಜ್ಯದಲ್ಲಿ ಪದೇ ಪದೇ ಪ್ರವಾಹ, ಭೂಕುಸಿತ ಸಂಭವಿಸುತ್ತಿರುವ ಬೆನ್ನಲ್ಲೇ ಪಶ್ಚಿಮ ಘಟ್ಟ ಪ್ರದೇಶದ ರಕ್ಷಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು