ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ಪ್ರೇಮ: 11 ವರ್ಷಗಳಿಂದ ಕಾಣೆಯಾದವಳು ನೆರೆಮನೆಯಲ್ಲೇ ಪ್ರೇಮಿಯ ಜೊತೆಗಿದ್ದಳು!

ಅಕ್ಷರ ಗಾತ್ರ

ಪಾಲಕ್ಕಾಡ್‌: 11 ವರ್ಷದಿಂದ ಯುವತಿ ಕಾಣೆ, 3 ತಿಂಗಳಿಂದ ಯುವಕ ಕಾಣೆ. ಕಾಣೆಯಾದವರಿಬ್ಬರು ನೆರೆ ಮನೆಯಲ್ಲೇ ಸಹಜೀವನ. ಯುವಕನ ಮನೆಯವರಿಗೆ ಹೆಣ್ಣುಮಗಳೊಬ್ಬಳು ತಮ್ಮ ಮನೆಯಲ್ಲಿದ್ದಾಳೆ ಎಂಬುದೇ ಗೊತ್ತಿಲ್ಲ. ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದ ಈ ಪ್ರಕರಣ ಮಲಯಾಳಂ ಸಿನಿಮಾಗಳ ಕತೆಯನ್ನೇ ಮೀರಿಸುವಂತಿದೆ.

ಸುಮಾರು 11 ವರ್ಷಗಳಿಂದ ಕಾಣೆಯಾಗಿದ್ದ ಮಹಿಳೆ ನೆರೆಮನೆಯಲ್ಲೇ ರಹಸ್ಯವಾಗಿ ಪ್ರೇಮಿ ಜೊತೆ ಜೀವನ ನಡೆಸುತ್ತಿದ್ದ ಘಟನೆ ಕೇರಳದ ಪಾಲಕ್ಕಾಡ್‍‌ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 2010ರಲ್ಲಿ ಸಜಿತಾ ಎಂಬ ಯುವತಿ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಸಜಿತಾಗೆ 28 ವರ್ಷ. ಕಾಣೆಯಾದ 11 ವರ್ಷಗಳನ್ನು ಕೇವಲ 500 ಮೀಟರ್‌ ದೂರದಲ್ಲಿರುವ ಮನೆಯಲ್ಲೇ ರಹಸ್ಯವಾಗಿ ಪ್ರೇಮಿಯ ಜೊತೆಗೆ ಜೀವನ ನಡೆಸುತ್ತಿದ್ದುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿವೆ.

ಪಾಲಕ್ಕಾಡ್‌ನ ಅಯಿಲುರ್‌ ಗ್ರಾಮದ ಮನೆಯಲ್ಲಿ ಸಜಿತಾ ರಹಸ್ಯವಾಗಿ ರೆಹ್ಮಾನ್‌ ಎಂಬ ಯುವಕನೊಂದಿಗೆ ಸಹಜೀವನ ನಡೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ಮನೆಯಲ್ಲಿ ಜೀವಿಸುತ್ತಿರುವ ರೆಹ್ಮಾನ್‌ನ ಪೋಷಕರು, ಸಹೋದರಿ ಮತ್ತು ಸೋದರಳಿಯನಿಗೂ ಈ ವಿಚಾರ ಗೊತ್ತಿರಲಿಲ್ಲ ಎಂಬುದು ಪರಮಾಶ್ಚರ್ಯಕ್ಕೆ ಕಾರಣವಾಗಿದೆ.

ರೋಚಕ ಘಟನೆಗೆ ಟ್ವಿಸ್ಟ್‌ ಎಂಬಂತೆ ಮಾರ್ಚ್‌ 2021ರಲ್ಲಿ ರೆಹ್ಮಾನ್‌ ಕಾಣೆಯಾಗಿರುವುದಾಗಿ ದೂರು ದಾಖಲಾಗಿದೆ. 3 ತಿಂಗಳೇ ಕಳೆದರೂ ರೆಹ್ಮಾನ್‌ನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಅಂತಿಮವಾಗಿ ರೆಹ್ಮಾನ್‌ ತನ್ನ ಸಹೋದರನ ಕೈಗೆ ಸಿಕ್ಕಿಬಿದ್ದಿದ್ದಾನೆ. ರೆಹ್ಮಾನ್‌ನನ್ನು ಸಹೋದರನೇ ಪೊಲೀಸರ ವಶಕ್ಕೆ ನೀಡಿದ್ದಾರೆ.

ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಕಾಣೆಯಾಗಿದ್ದ ಸಜಿತಾ ತನ್ನೊಂದಿಗೇ ಇರುವುದಾಗಿ ಬಾಯ್ಬಿಟ್ಟಿದ್ದಾನೆ.

'ರೆಹ್ಮಾನ್‌ ತನ್ನ ಕೊಠಡಿಯ ಹತ್ತಿರ ಯಾರನ್ನು ಸುಳಿಯಲು ಬಿಡುತ್ತಿರಲಿಲ್ಲ. ಕುಟುಂಬದ ಸದಸ್ಯರ ಪೈಕಿ ಯಾರಾದರು ಆತನ ರೂಮ್‌ಗೆ ಹೋದರೆ ತುಂಬಾ ಸಿಟ್ಟಾಗುತ್ತಿದ್ದ. ಮನೆಯಲ್ಲಿದ್ದಾಗ ರೂಮ್‌ನಲ್ಲೇ ಊಟ ಮಾಡುತ್ತಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.

ಸಜಿತಾ ರಾತ್ರಿ ವೇಳೆ ಮನೆಯಿಂದ ಹೊರಗೆ ಬರುತ್ತಿದ್ದಳು. ಕಿಟಕಿಯನ್ನು ತೆರೆದು ಹೊರಗಿನ ಗಾಳಿ ಸೇವನೆ ಮಾಡುತ್ತಿದ್ದಳು. ಆದಷ್ಟು ಬೇಗ ಈ ಮನೆಯಿಂದ ಹೊರಗೆ ಹೋಗಿ ಜೀವಿಸುವ ಬಗ್ಗೆ ಉಪಾಯ ಹೂಡಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದ ಅದು ಸಾಧ್ಯವಾಗಿರಲಿಲ್ಲ. ಸಜಿತಾಗೆ ರೂಮ್‌ ಒಳಗೆ ಟಿವಿಯನ್ನು ಅಳವಡಿಸಿ ಕೊಟ್ಟಿದ್ದ.

ಇದನ್ನೂ ಓದಿ:

ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ಆದರೆ ಅದನ್ನು ಹೊರಗೆ ಹೇಳಲು ಭಯವಿದ್ದ ಕಾರಣ ಹೀಗೆ ರಹಸ್ಯವಾಗಿ ಜೀವಿಸುವಂತಾಯಿತು ಎಂದು ಪ್ರೇಮಿಗಳು ಹೇಳಿದ್ದಾರೆ.

ಹೇಳಿಕೆಯನ್ನು ಸ್ವೀಕರಿಸಿದ ಪೊಲೀಸರು ಇಬ್ಬರನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ರೆಹ್ಮಾನ್‌ ಜೊತೆ ಜೀವಿಸುವುದಾಗಿ ಸಜಿತಾ ಕೋರ್ಟ್‌ಗೆ ಸ್ಪಷ್ಟಪಡಿಸಿದ ನಂತರ ಆಕೆಯನ್ನು ರೆಹ್ಮಾನ್‌ ಜೊತೆ ಕಳುಹಿಸಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT