ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಚಹಾ ಕಪ್‌ಗಳ ಬಳಕೆ

Last Updated 29 ನವೆಂಬರ್ 2020, 15:47 IST
ಅಕ್ಷರ ಗಾತ್ರ

ನವದೆಹಲಿ: ಇನ್ನು ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಪ್ರಯಾಣಿಕರು ಪ್ಲಾಸ್ಟಿಕ್‌ ಬದಲು ಮಣ್ಣಿನಿಂದ ಮಾಡಿದ ಕಪ್‌ಗಳಲ್ಲಿ ಚಹಾ ಹೀರಲಿದ್ದಾರೆ.

‘ಪ್ಲಾಸ್ಟಿಕ್‌ ಮುಕ್ತ ಭಾರತ’ ಅಭಿಯಾನದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಭಾನುವಾರ ಹೇಳಿದ್ದಾರೆ.

ರಾಜಸ್ಥಾನದ ಅಲ್ವಾರ್‌ ಜಿಲ್ಲೆಯ ಧಿಗಾವರ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಧಿಗಾವರ–ಬಂಡಿಕುಯಿ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ ನೀಡುವ ಪದ್ಧತಿ ಈಗಾಗಲೇ ಜಾರಿಯಲ್ಲಿದೆ. ಉಳಿದ ನಿಲ್ದಾಣಗಳಿಗೂ ಇದನ್ನು ವಿಸ್ತರಿಸಲು ಮುಂದಾಗಿದ್ದೇವೆ. ಇದರಿಂದ ಗುಡಿ ಕೈಗಾರಿಕೆಯನ್ನೇ ನಂಬಿರುವ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ. ಜೊತೆಗೆ ‘ಪ್ಲಾಸ್ಟಿಕ್‌ ಮುಕ್ತ ಭಾರತ’ ಅಭಿಯಾನಕ್ಕೆ ಸಚಿವಾಲಯ ಕೈಜೋಡಿಸಿದಂತಾಗಲಿದೆ’ ಎಂದಿದ್ದಾರೆ.

ರೈಲ್ವೆ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡುವ ಹಾಗೂ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ 2004ರಲ್ಲಿ ಮಣ್ಣಿನ ಕಪ್‌ಗಳಲ್ಲಿ ಟೀ ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಆಗ ಲಾಲು ಪ್ರಸಾದ್‌ ಅವರು ರೈಲ್ವೆ ಖಾತೆ ಸಚಿವರಾಗಿದ್ದರು. ಪರಿಸರ ಸ್ನೇಹಿ ಮಣ್ಣಿನ ಕಪ್‌ಗಳಿಗೆ ತಗಲುವ ವೆಚ್ಚ ದುಬಾರಿಯಾಗಿದ್ದು, ಇದರ ಪೂರೈಕೆಯೂ ಕಡಿಮೆಯಾಗಿತ್ತು. ಹೀಗಾಗಿ ಪ್ಲಾಸ್ಟಿಕ್‌ ಮತ್ತು ಪೇಪರ್‌ ಕಪ್‌ಗಳ ಬಳಕೆ ಹೆಚ್ಚಾಗಿತ್ತು.

ಕಳೆದ ವರ್ಷ ಗೋಯಲ್‌ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, 100 ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಟೀ ನೀಡುವುದನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದ್ದರು. ವಿಮಾನ ಹಾಗೂ ಬಸ್‌ ನಿಲ್ದಾಣಗಳಲ್ಲಿ ಚಹಾ ಅಂಗಡಿಗಳ ಗುತ್ತಿಗೆ ಪಡೆದಿರುವವರೂ ಗ್ರಾಹಕರಿಗೆ ಮಣ್ಣಿನ ಕಪ್‌ಗಳಲ್ಲೇ ಟೀ ನೀಡುವುದನ್ನು ಕಡ್ಡಾಯಗೊಳಿಸುವಂತೆಯೂ ಸಲಹೆ ನೀಡಿದ್ದರು.

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಸಚಿವರಾಗಿದ್ದ ಅವಧಿಯಲ್ಲಿ ಗಡ್ಕರಿ ಅವರು ಮಣ್ಣಿನ ಕಪ್‌ಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕುಂಬಾರರಿಗೆ ವಿದ್ಯುತ್‌ ಚಾಲಿತ ಉಪಕರಣಗಳನ್ನು ಪೂರೈಸುವ ಯೋಜನೆಗೆ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT