ಸೋಮವಾರ, ಅಕ್ಟೋಬರ್ 26, 2020
23 °C

ಗಡಿ ಬಿಕ್ಕಟ್ಟು ಶಮನಕ್ಕೆ ಮತ್ತೆ ಕಮಾಂಡರ್ ಮಟ್ಟದ ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗಡಿ ಬಿಕ್ಕಟ್ಟನ್ನು ಬಗೆಹರಿಸಲು ಪೂರ್ವ ಲಡಾಖ್‌ನ ಎಲ್ಲ ಘರ್ಷಣೆಯ ಸ್ಥಳಗಳಿಂದ ಚೀನಾ ಸೇನೆ ಯೋಧರು ಶೀಘ್ರದಲ್ಲೇ ಹಿಂದಕ್ಕೆ ಸರಿಯಬೇಕು ಹಾಗೂ ಏಪ್ರಿಲ್‌ಗೂ ಮುಂಚಿತವಿದ್ದ ಯಥಾಸ್ಥಿತಿಯನ್ನು ಪಾಲಿಸಬೇಕು ಎಂದು ಭಾರತವು ಚೀನಾಗೆ ಒತ್ತಾಯಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.  

ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಭಾರತದ ಭಾಗದ ಚುಶೂಲ್‌ ಪ್ರದೇಶದಲ್ಲಿ ಸೋಮವಾರ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಏಳನೇ ಸುತ್ತಿನ ಮಾತುಕತೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮಾತುಕತೆ ರಾತ್ರಿ 8.30 ನಂತರವೂ ಮುಂದುವರಿಯಿತು. 

ಗಡಿ ಬಿಕ್ಕಟ್ಟು ಪರಿಸ್ಥಿತಿ ಆರನೇ ತಿಂಗಳಿಗೆ ಮುಂದುವರಿದಿದ್ದು, ಗಡಿ ಭಾಗದಲ್ಲಿ ಭಾರತ ಮತ್ತು ಚೀನಾದ 1 ಲಕ್ಷಕ್ಕೂ ಅಧಿಕ ಯೋಧರು ನಿಯೋಜನೆಗೊಂಡಿದ್ದಾರೆ. ಸಭೆಯ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಘರ್ಷಣೆ ನಡೆದ ಸ್ಥಳದಿಂದ ಯೋಧರು ಹಿಂದಕ್ಕೆ ಸರಿಯುವ ಪ್ರಕ್ರಿಯೆಯ ರೂಪುರೇಷೆ ಅಂತಿಮಗೊಳಿಸವುದೇ ಸಭೆಯ ಮುಖ್ಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಲೇಹ್‌ ಮೂಲದ 14ನೇ ಕಾರ್ಪ್ಸ್‌ನ ಕಮಾಂಡರ್‌ ಲೆ.ಜನರಲ್‌ ಹರೀಂದರ್‌ ಸಿಂಗ್‌ ನೇತೃತ್ವದ ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್‌ ಶ್ರೀವಾಸ್ತವ ಅವರಿದ್ದರು. ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳೂ ಇದ್ದರು ಎಂದು ಮೂಲಗಳು ತಿಳಿಸಿವೆ. 

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್ ಮತ್ತು ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಮುಖ್ಯಸ್ಥರಿದ್ದ ಚೀನಾ ಅಧ್ಯಯನ ತಂಡವು(ಸಿಎಸ್‌ಜಿ) ಸೇನಾ ಮಾತುಕತೆಗೆ ಭಾರತದ ಕಾರ್ಯತಂತ್ರವನ್ನು ಶುಕ್ರವಾರ ಅಂತಿಮಗೊಳಿಸಿದ್ದರು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು