ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರ ಪ್ರಕರಣ | ಮಿಶ್ರಾ ವಜಾಕ್ಕೆ ಪಟ್ಟು: ಸಂಸತ್ತಿನ ಒಳಗೆ, ಹೊರಗೆ ಪ್ರತಿಭಟನೆ

Last Updated 16 ಡಿಸೆಂಬರ್ 2021, 18:36 IST
ಅಕ್ಷರ ಗಾತ್ರ

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಜಾಕ್ಕೆ ಆಗ್ರಹಿಸಿ,ಸಂಸತ್ತಿನ ಒಳಗೂ ಹೊರಗೂ ಸರ್ಕಾರದ ಮೇಲೆ ಪ್ರತಿಪಕ್ಷಗಳು ಒತ್ತಡ ಹಾಕಿವೆ. ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳಲ್ಲಿ ಸದಸ್ಯರು ಗುರುವಾರವೂ ಪ್ರತಿಭಟನೆ ಮುಂದುವರಿಸಿದರು. ಆದರೆ ಮಿಶ್ರಾ ಅವರಿಂದ ರಾಜೀನಾಮೆ ಪಡೆಯುವ ಬಗ್ಗೆ ಸರ್ಕಾರ ಯಾವುದೇ ಸುಳಿವು ನೀಡಲಿಲ್ಲ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಮಿಶ್ರಾ ಅವರ ವಿಷಯ ಪ್ರಸ್ತಾಪಿಸುವುದಕ್ಕೆ ಮುನ್ನವೇ, ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮುಂದೂಡಿದರು.

ಮಿಶ್ರಾ ವಜಾಕ್ಕೆ ಆಗ್ರಹಿಸಿ ಎರಡೂ ಸದನಗಳಲ್ಲಿ ಸಂಸದರು ಘೋಷಣೆಗಳನ್ನು ಕೂಗಿ, ಧರಣಿ ನಡೆಸಿದ್ದರಿಂದ ಯಾವುದೇ ಮಹತ್ವದ ವಿಚಾರಗಳು ಚರ್ಚೆಯಾಗಲಿಲ್ಲ. ಎಂಎಸ್‌ಎಂಇ ವಲಯದ ಬಗ್ಗೆ ಪ್ರಶ್ನೆ ಕೇಳುವಂತೆ ರಾಹುಲ್ ಗಾಂಧಿ ಅವರನ್ನು ಸ್ಪೀಕರ್ ಓಂ ಬಿರ್ಲಾ ಕರೆದರು. ಈ ಸಮಯವನ್ನು ಮಿಶ್ರಾ ರಾಜೀನಾಮೆಗೆ ಆಗ್ರಹಿಸುವುದಕ್ಕೆ ರಾಹುಲ್ ಬಳಸಿಕೊಂಡರು. ‘ಮಿಶ್ರಾ ಒಬ್ಬ ಕ್ರಿಮಿನಲ್. ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು. ಅವರ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು’ ಎಂದು ಅವರು ಪಟ್ಟು ಹಿಡಿದರು.

ಈ ಬಗ್ಗೆ ಗದ್ದಲ ಮುಂದುವರಿದಿದ್ದರಿಂದ, ಮಧ್ಯಾಹ್ನದ 2 ಗಂಟೆವರೆಗೆ ಕಲಾಪವನ್ನು ಮುಂದೂಡಲಾಯಿತು. ಸದನ ಸಮಾವೇಶಗೊಂಡಾಗ ಮತ್ತೆ ಇದೇ ವಿಚಾರವಾಗಿ ಕೋಲಾಹಲ ಎದ್ದಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಮಿಶ್ರಾ ವಿಷಯವನ್ನುರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸುತ್ತಿದ್ದಂತೆಯೇ, ಸಭಾಧ್ಯಕ್ಷರು ಕಲಾಪ ಮುಂದೂಡಿದರು. ಮಧ್ಯಾಹ್ನ 2 ಗಂಟೆಗೆ ಸದನ ಸಮಾವೇಶಗೊಂಡರೂ, ಓಮೈಕ್ರಾನ್‌ ಕುರಿತ ಚರ್ಚೆಯನ್ನು ಮುಂದೆ ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಾಗಲಿಲ್ಲ.

‘ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸುವುದಕ್ಕೂ ಬಿಡದೆ ಕಲಾಪವನ್ನು ಮುಂದೂಡಲಾಗುತ್ತಿದೆ. ಇದರ ಅರ್ಥ ಏನು. ನಮ್ಮ ಹಕ್ಕುಗಳನ್ನು ಸಭಾಧ್ಯಕ್ಷರು ರಕ್ಷಿಸಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಿಶ್ರಾ ಅವರನ್ನು ಸಂಪುಟದಿಂದ ಕಿತ್ತುಹಾಕದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟೀಕಿಸಿದ್ದಾರೆ.ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸತ್ ಭವನದ ಸಮೀಪ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ವಿಧಾನಸಭೆ ಎರಡನೇ ದಿನದ ಕಲಾಪದಲ್ಲೂ ಮಿಶ್ರಾ ವಜಾಕ್ಕೆ ಆಗ್ರಹ ಕೇಳಿಬಂದಿತು.

***

* ಎಸ್‌ಸಿ/ಎಸ್‌ಟಿ ನೌಕರರು ಕೆಲಸಕ್ಕೆ ಸೇರಿದ ಆರು ತಿಂಗಳ ಒಳಗಾಗಿ ಅವರ ಜಾತಿ ಪ್ರಮಾಣಪತ್ರಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಪಿಂಚಣಿ, ಬಡ್ತಿ ವೇಳೆ ಜಾತಿ ಪ್ರಮಾಣಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಆಗುವ ವಿಳಂಬವನ್ನು ಇದರಿಂದ ತಪ್ಪಿಸಬಹುದು ಎಂದು ತಿಳಿಸಿದೆ.

* ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ‘ಕಂಟೆಂಟ್’ಗಳನ್ನು ನಿರ್ವಹಣೆ ಮಾಡಲು ಶಾಸನಬದ್ಧ ಮಾಧ್ಯಮ ನಿರ್ವಹಣಾ ಪ್ರಾಧಿಕಾರ ರಚಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.ಪ್ರಸ್ತುತ, ದೇಶದಲ್ಲಿಸುದ್ದಿ ಮಾಧ್ಯಮಗಳನ್ನೂ ಒಳಗೊಂಡಂತೆ, ವಿವಿಧ ವೇದಿಕೆಗಳಲ್ಲಿ ಪ್ರಕಟವಾಗುವ ವಿಷಯಗಳನ್ನು ನಿಯಂತ್ರಿಸುವ ಏಕೀಕೃತ ಸಂಸ್ಥೆ ಇಲ್ಲ ಎಂದು ಸಮಿತಿ ಹೇಳಿದೆ.

*

ಎಸ್‌ಐಟಿ ವರದಿಯ ಬಳಿಕವೂ ಮಿಶ್ರಾ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಲಾಗುತ್ತಿದೆ ಎಂದರೆ, ಅವರನ್ನು ಪ್ರಧಾನಿ ರಕ್ಷಿಸುತ್ತಿದ್ದಾರೆ ಎನ್ನಬೇಕಾಗುತ್ತದೆ.
-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಪ್ರತಿಪಕ್ಷ ನಾಯಕ

*

ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ. ಸಂಸತ್ತಿನಲ್ಲಿ ಚರ್ಚೆಗೆ ಕರೆದರೆ, ಪ್ರತಿಪಕ್ಷಗಳು ಧಿಕ್ಕರಿಸುತ್ತಿವೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT