ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ ಖೇರಿ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ

Last Updated 26 ಅಕ್ಟೋಬರ್ 2021, 14:54 IST
ಅಕ್ಷರ ಗಾತ್ರ

ಲಖಿಂಪುರ ಖೇರಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಗುರ್ವಿಂದರ್ ಸಿಂಗ್ ಮತ್ತು ವಿಚಿತ್ರಾ ಸಿಂಗ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ. ಅ. 4 ರಂದು ಸುಮಿತ್ ಜೈಸ್ವಾಲ್ ಅವರು ನೀಡಿದ ದೂರಿನ ಮೇರೆಗೆ ದಾಖಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಲಖೀಂಪುರ್ ಪೊಲೀಸ್ ಕ್ರೈಂ ಬ್ರಾಂಚ್ ತಿಳಿಸಿದೆ.

ಗುರ್ಮೇಜ್ ಸಿಂಗ್ ಅವರ ಪುತ್ರ ಗುರ್ವಿಂದರ್ ಸಿಂಗ್ ಅವರು ಲಖಿಂಪುರ ಖೇರಿ ಜಿಲ್ಲೆಯ ಗೋಲಾ ಪ್ರದೇಶದ ಮೊಕ್ರಮೌ ಅಲಿಗಂಜ್ ನಿವಾಸಿಯಾಗಿದ್ದರೆ, ಲಖ್ವಿಂದರ್ ಸಿಂಗ್ ಅವರ ಪುತ್ರ ವಿಚಿತ್ರಾ ಸಿಂಗ್ ಅದೇ ಜಿಲ್ಲೆಯ ಭೀರಾ ನಿವಾಸಿಯಾಗಿದ್ದಾರೆ ಎಂದು ಕ್ರೈಂ ಬ್ರಾಂಚ್-ಲಖಿಂಪುರ ಹೇಳಿಕೆಯಲ್ಲಿ ತಿಳಿಸಿದೆ.

‌ಲಖಿಂಪುರ–ಖೇರಿಯಲ್ಲಿ ಅ.3ರಂದು ನಡೆದಿದ್ದ ಹಿಂಸಾಚಾರದಲ್ಲಿ ಎಂಟು ಜನರು ಮೃತಪಟ್ಟಿದ್ದರು. ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್‌ಯುವಿಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿದಿದ್ದವು. ಈ ವೇಳೆ ನಾಲ್ವರು ರೈತರು ಬಲಿಯಾಗಿದ್ದರು. ಆಕ್ರೋಶಗೊಂಡ ರೈತರು ಎರಡೂ ಎಸ್‌ಯುವಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಈ ಎಸ್‌ಯುವಿಗಳಲ್ಲಿ ಇದ್ದವರಲ್ಲಿ ನಾಲ್ವರು ಮೃತಪಟ್ಟಿದ್ದರು. ಮೃತರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಅವರ ಚಾಲಕ ಮತ್ತು ಪತ್ರಕರ್ತ ಸೇರಿದ್ದರು.

ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ವಾರ್ಡ್ ಸದಸ್ಯ ಜೈಸ್ವಾಲ್, ಪ್ರತಿಭಟನಾಕಾರರಲ್ಲಿದ್ದ 'ದುಷ್ಕರ್ಮಿಗಳು' ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದ ವಾಹನದ ಮೇಲೆ ಬಿದಿರಿನ ಕೋಲುಗಳು, ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದರಿಂದಾಗಿ ಚಾಲಕ ಗಾಯಗೊಂಡರು ಮತ್ತು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದರು. ಪತ್ರಕರ್ತ ರಮಣ್ ಕಶ್ಯಪ್, ಕಾರು ಚಾಲಕ ಹರಿ ಓಂ ಮತ್ತು ಬಿಜೆಪಿ ಕಾರ್ಯಕರ್ತರಾದ ಶುಭಂ ಮಿಶ್ರಾ ಮತ್ತು ಶ್ಯಾಂ ಸುಂದರ್ ಪ್ರತಿಭಟನಾಕಾರರಿಂದ ಹತ್ಯೆಗೊಳಗಾದರು' ಎಂದು ದೂರಿನಲ್ಲಿ ಹೇಳಿದ್ದರು.

ಬಹ್ರೈಚ್ ಮೂಲದ ಜಗಜಿತ್ ಸಿಂಗ್ ನೀಡಿದ ದೂರಿನ ಮೇರೆಗೆ ದಾಖಲಿಸಲಾದ ಮತ್ತೊಂದು ಎಫ್‌ಐಆರ್‌ನಲ್ಲಿ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಜೊತೆಗೆ 15 ರಿಂದ 20 ಅಪರಿಚಿತ ವ್ಯಕ್ತಿಗಳನ್ನು ಆರೋಪಿಗಳೆಂದು ಹೇಳಲಾಗಿದೆ.

ಹಿಂಸಾಚಾರ 'ಪೂರ್ವಯೋಜಿತ' ಮತ್ತು ಅದಕ್ಕಾಗಿ ಸಚಿವರು ಮತ್ತು ಅವರ ಮಗ 'ಸಂಚು ರೂಪಿಸಲಾಗಿತ್ತು' ಎಂದಿದ್ದ ಜಗಜಿತ್ ಸಿಂಗ್ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆಶಿಶ್ ಮಿಶ್ರಾ ಸೇರಿದಂತೆ ಈವರೆಗೂ 13 ಮಂದಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT