ಭಾನುವಾರ, ನವೆಂಬರ್ 29, 2020
25 °C

'ಮೂರು ವರ್ಷಗಳ ಹಿಂದೆ ನನ್ನನ್ನು ಕೊಲ್ಲಲು ಲಾಲು ಪ್ರಸಾದ್ ಮಾಟ ಮಂತ್ರ ಮಾಡಿದ್ದರು'

ಎಎನ್ಐ Updated:

ಅಕ್ಷರ ಗಾತ್ರ : | |

Sushil Kumar Modi

ಪಟ್ನಾ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ನನ್ನನ್ನು ಕೊಲ್ಲಲು ಮಾಟ ಮಂತ್ರಗಳನ್ನು ನಡೆಸಿದ್ದರು ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ದಿನಗಳಿರುವಾಗಲೇ ಅವರು ಈ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಲಾಲು ಯಾದವ್ ಅವರ ಜೀವನಶೈಲಿ ಮತ್ತು ಮಾಟ ಮಂತ್ರದ ಮೇಲಿನ ನಂಬಿಕೆಯ ಬಗ್ಗೆ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಲಾಲು ಪ್ರಸಾದ್ ಅವರು ಎಷ್ಟೊಂದು ಮೂಢನಂಬಿಕೆಯುಳ್ಳವರಾಗಿದ್ದರೆಂದರೆ, ಅವರು ತಂತ್ರಿಗಳ ಆಜ್ಞೆಯ ಮೇರೆಗೆ ಬಿಳಿ ಕುರ್ತಾ ಧರಿಸುವುದನ್ನು ನಿಲ್ಲಿಸಿದ್ದಲ್ಲದೆ, ತಂತ್ರಿ ಶಂಕರ್ ಚರಣ್ ತ್ರಿಪಾಠಿ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಿದರು. ಅದೇ ಮಾಂತ್ರಿಕ ವಿಂಧ್ಯಾಚಲ್ ಧಾಮ್ (ಮಿರ್ಜಾಪುರ) ದಲ್ಲಿ ಲಾಲು ಪ್ರಸಾದ್‌ಗೆ ಮಾಟ ಮಂತ್ರ ನಡೆಸಿದ್ದರು. ಅವರು ಮೂರು ವರ್ಷಗಳ ಹಿಂದೆ ನನ್ನನ್ನು ಕೊಲ್ಲಲು ಮಾಂತ್ರಿಕ ಆಚರಣೆಗಳನ್ನು ಸಹ ಮಾಡಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಲಾಲು ಪ್ರಸಾದ್ ಅವರು ಸಾರ್ವಜನಿಕರನ್ನು ನಂಬುವುದಿಲ್ಲ, ಆದ್ದರಿಂದ ಅವರು ಮಾಟಮಂತ್ರ, ಪ್ರಾಣಿ ಬಲಿ ಮತ್ತು ಆತ್ಮಗಳ ಆರಾಧನೆ ಮುಂತಾದ ಆಚರಣೆಗಳನ್ನು ಮಾಡುತ್ತಲೇ ಇದ್ದರು. ಇದರ ಹೊರತಾಗಿಯೂ, ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ ಅಥವಾ ಅವರ ಶಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಇನ್ನೂ 14 ವರ್ಷ ಜೈಲಿನಲ್ಲಿ ಕಳೆಯಬಹುದು ಎಂದು ತಿಳಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ರಾಂಚಿಯ ಕೈಲಿ ಬಂಗಲೆಯಲ್ಲಿ ಯಾದವ್ ನವಮಿ ದಿನದಂದು ಮೂರು ಮೇಕೆಗಳನ್ನು ಬಲಿ ನೀಡಲಿದ್ದಾರೆ. ಮೇ 26, 2014 ರಂದು ಬಿಜೆಪಿಯ ಉನ್ನತ ನಾಯಕ ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ಲಾಲು ಪ್ರಸಾದ್ ಅವರು ಪ್ರಮಾಣ ವಚನ ಸ್ವೀಕಾರವನ್ನು ಅಸಹ್ಯಕರವೆಂದು ಕರೆದರು ಮತ್ತು ಸರ್ಕಾರ ಐದು ವರ್ಷಗಳ ಕಾಲ ನಡೆಯುವುದಿಲ್ಲ ಎಂದಿದ್ದರು ಎಂದು ಸುಶೀಲ್ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಭಾರತೀಯ ರಾಜಕಾರಣದ ಚಿತ್ರಣವನ್ನೇ ಬದಲಿಸಿದ್ದು ಮಾತ್ರವಲ್ಲ, ಭ್ರಷ್ಟಾಚಾರ ರಹಿತ ಸರ್ಕಾರವನ್ನು ನಡೆಸಿದರು. ಜನರಿಗೆ ಜನ ಧನ್ ಖಾತೆಗಳನ್ನು ನೀಡಿದರು, ಒಂಬತ್ತು ಕೋಟಿ ಬಡವರಿಗೆ ಉಚಿತ ಅನಿಲ ಸಂಪರ್ಕವನ್ನು ನೀಡಿದರು ಮತ್ತು ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದರು ಎಂದಿದ್ದಾರೆ.

ಇದನ್ನೂ ಓದಿ: 

2005 ರಲ್ಲಿ ಲಾಲು -ರಾಬ್ರಿ ಅವರ ದುಷ್ಕೃತ್ಯವನ್ನು ಸಾರ್ವಜನಿಕರು ತಿರಸ್ಕರಿಸಿದಾಗ, ಲಾಲು ಪ್ರಸಾದ್ ಅವರು ಮುಖ್ಯಮಂತ್ರಿಯ ನಿವಾಸವನ್ನು ತೊರೆಯಲು ಒಂದೂವರೆ ತಿಂಗಳು ತೆಗೆದುಕೊಂಡರು ಮತ್ತು ನಂತರ ಅವರು ಒಂದು ವಸ್ತುವನ್ನು (ಮಾಟಮಂತ್ರಕ್ಕೆ ಸಂಬಂಧಿಸಿದ) ನಿವಾಸದ ಗೋಡೆಯಲ್ಲಿ ಇರಿಸಿದ್ದು, ಯಾರೂ ಅಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಆದರೆ ಅದೇ ನಿವಾಸದಲ್ಲಿ ಉಳಿದುಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 15 ವರ್ಷಗಳಿಂದ ಬಿಹಾರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ಅತ್ಯಾಚಾರಕ್ಕೆ ಬಲಿಯಾದ ವಲಸಿಗ ಬಿಹಾರಿ ಬಾಲಕಿಯ ಶವವನ್ನು ಕಾಂಗ್ರೆಸ್ ಆಡಳಿತದ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಪತ್ತೆ ಮಾಡಲಾಗಿದೆ. ರಾಹುಲ್ ಗಾಂಧಿ ಅಲ್ಲಿಗೆ ಹೋಗುತ್ತಾರೆಯೇ? ಶವವನ್ನು ತಾಂಡಾ ಆಸ್ಪತ್ರೆಗೆ ತರುತ್ತಿರುವಾಗ, ಪಂಜಾಬ್ ಪೊಲೀಸರು ಸಾರ್ವಜನಿಕರ ಕೋಪದಿಂದ ಅಪರಾಧಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ಸುಶೀಲ್ ಪ್ರಶ್ನಿಸಿದ್ದಾರೆ.

ಆರು ವರ್ಷದ ಬಿಹಾರಿ ಬಾಲಕಿಯನ್ನು ಕ್ರೌರ್ಯದಿಂದ ಜೀವಂತವಾಗಿ ಸುಟ್ಟುಹಾಕಿದ ಹೋಶಿಯಾರ್‌ಪುರಕ್ಕೆ ರಾಹುಲ್ ಗಾಂಧಿ ಇನ್ನೂ ಏಕೆ ಭೇಟಿ ನೀಡಿಲ್ಲ. ಬಿಹಾರದ ಇಬ್ಬರು ಅತ್ಯಾಚಾರಿಗಳ ಪತ್ನಿಯರಿಗೆ ಟಿಕೆಟ್ ನೀಡಿರುವುದರಿಂದ ಆರ್‌ಜೆಡಿಯು ಏಕೆ ಮೌನವಹಿಸಿದೆ ಎಂಬುದು ಅರ್ಥವಾಗುತ್ತದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಇಂದು ಅತ್ಯಾಚಾರಿಗಳೊಂದಿಗೆ ನಿಂತಿವೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು...

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು