ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂತಿನ ಚಿಂತೆಗೆ ಸದ್ಯಕ್ಕೆ ತೆರೆ

ಸಾಲ ಮುಂದೂಡಿಕೆ: ತೀರ್ಮಾನಕ್ಕೆ ಕೇಂದ್ರಕ್ಕೆ 2 ವಾರ ಗಡುವು
Last Updated 10 ಸೆಪ್ಟೆಂಬರ್ 2020, 19:01 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್‌ ಸಾಲದ ಕಂತನ್ನು ತಕ್ಷಣವೇ ಪಾವತಿ ಮಾಡುವುದರಿಂದ ಸಾಲಗಾರರಿಗೆ ಸೆ. 28ರವರೆಗೆ ವಿನಾಯಿತಿ ದೊರೆತಿದೆ.ಆಗಸ್ಟ್‌ 30ರವರೆಗೆ ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸಿಲ್ಲದ ಯಾವುದೇ ಖಾತೆಯನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಎಂದು ಘೋಷಿಸುವಂತಿಲ್ಲ ಎಂದು ಸೆ.3ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಮುಂದಿನ ಆದೇಶದವರೆಗೆ ಗುರುವಾರ‌ ವಿಸ್ತರಿಸಿದೆ.

ಮುಂದೂಡಿಕೆ ಅವಧಿಗೆ ಬಡ್ಡಿ ವಿಧಿಸುವ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದಕ್ಕೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಎರಡು ವಾರಗಳ ಸಮಯಾವಕಾಶ ನೀಡಿದೆ. ಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌. ಸುಭಾಷ್‌ ರೆಡ್ಡಿ ಮತ್ತು ಎಂ.ಆರ್‌. ಶಾ ಅವರಿದ್ದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್‌ 28ಕ್ಕೆ ಮುಂದೂಡಿದೆ. ಸರ್ಕಾರಕ್ಕೆ ಇದು ಕೊನೆಯ ಅವಕಾಶ. ಇನ್ನು ಮುಂದೆ ವಿಚಾರಣೆಯನ್ನು ಮುಂದೂಡಲಾಗುವುದಿಲ್ಲ.ಸಾಲದ ಕಂತು ಪಾವತಿ ಮುಂದೂಡಿಕೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಕೇಂದ್ರ ಮತ್ತು ಆರ್‌ಬಿಐ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಕೋರ್ಟ್‌ ನಿರೀಕ್ಷಿಸುತ್ತದೆ. ಸರ್ಕಾರವು ಅತ್ಯಂತ ಸ್ಪಷ್ಟ ಮತ್ತು ನಿಖರ ನಿರ್ಧಾರ ಕೈಗೊಳ್ಳಬೇಕು ಎಂದೂ ಪೀಠವು ಹೇಳಿದೆ.

ಬಡ್ಡಿ ಮನ್ನಾ ಕೋರಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಪ್ರಸ್ತಾಪವಾಗಿರುವ ಎಲ್ಲ ಅಂಶಗಳ ಬಗ್ಗೆ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕೋವಿಡ್‌ನಿಂದಾಗಿ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎರಡು ವಾರಗಳಲ್ಲಿ ಸೂಕ್ತವಾದ ನಿರ್ಧಾರಕ್ಕೆ ಸರ್ಕಾರ ಬರಲಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಭರವಸೆ ನೀಡಿದ್ದಾರೆ.

ವಿದ್ಯುತ್‌ ಕ್ಷೇತ್ರದ ಸಂಕಷ್ಟ

ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ವಿದ್ಯುತ್‌ ವಿತರಣೆ ಕಂಪನಿಗಳು (ಡಿಸ್ಕಾಂ) ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿವೆ. ಡಿಸ್ಕಾಂಗಳ ಸಾಲದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯುತ್‌ ಕ್ಷೇತ್ರದ ಸಾಲದ ಪೂರ್ಣ ಹೊಣೆಯನ್ನು ಬ್ಯಾಂಕುಗಳ ಮೇಲೆ ಹೊರಿಸಲಾಗದು ಎಂದು ಬ್ಯಾಂಕುಗಳ ಸಂಘದ ಪರವಾಗಿ ಹಾಜರಾಗಿದ್ದ ವಕೀಲ ಹರೀಶ್‌ ಸಾಳ್ವೆ ಹೇಳಿದ್ದಾರೆ.

ಈಗಿನ ಸಾಲ ಮರುಹೊಂದಾಣಿಕೆಯಿಂದ ಶೇ 95ರಷ್ಟು ಸಾಲಗಾರರಿಗೆ ಯಾವುದೇ ಪ್ರಯೋಜನ ಇಲ್ಲ. ಸಾಲಗಾರರ ಸಾಲ ಸಾಮರ್ಥ್ಯದ ರೇಟಿಂಗ್‌ ಕಡಿಮೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಕ್ರೆಡಾಯ್‌ (ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘಗಳ ಒಕ್ಕೂಟ) ಪರ ವಕೀಲ ಕಪಿಲ್‌ ಸಿಬಲ್‌ ಒತ್ತಾಯಿಸಿದರು. ಸಾಲ ಮರುಪಾವತಿ ಮುಂದೂಡಿಕೆಯನ್ನು ವಿಸ್ತರಿಸಬೇಕು, ರೇಟಿಂಗ್‌ ಕಡಿತ ಮತ್ತು ಮುಂದೂಡಿಕೆ ಅವಧಿಗೆ ಬಡ್ಡಿ ಹೇರಿಕೆ ನಿಲ್ಲಿಸಬೇಕು ಎಂದು ಅವರು ಕೋರಿದರು.

ಸಾಲಗಾರರ ಬೇಡಿಕೆ ಏನು?

ಬ್ಯಾಂಕುಗಳು ಚಕ್ರಬಡ್ಡಿ ವಿಧಿಸುತ್ತಿವೆ. ಸಾಲಗಳನ್ನು ಈಗ ಮರುಹೊಂದಾಣಿಕೆ ಮಾಡಲಾಗುತ್ತಿದೆ. ಇದನ್ನು ಮೊದಲೇ ಮಾಡಬೇಕಿತ್ತು ಎಂದು ಸಾಲಗಾರರ ಪರ ವಕೀಲ ರಾಜೀವ್‌‌ ದತ್ತಾ ಹೇಳಿದರು.

ಬಡ್ಡಿಯ ಮೇಲೆ ಬಡ್ಡಿ ಹಾಕುವ ವಿಚಾರದಲ್ಲಿ ಸರ್ಕಾರವು ಸ್ಪಷ್ಟ ನಿಲುವು ಪ್ರಕಟಿಸಬೇಕು. ಕೋವಿಡ್‌ನಿಂದಾಗಿ ಲಕ್ಷಾಂತರ ಜನರು ಆಸ್ಪತ್ರೆಯಲ್ಲಿದ್ದಾರೆ, ಹಲವರು ಕೆಲಸ ಕಳೆದುಕೊಂಡಿದ್ದಾರೆ ಎಂಬುದರತ್ತ ದತ್ತಾ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT