ಸೋಮವಾರ, ಸೆಪ್ಟೆಂಬರ್ 26, 2022
24 °C

ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಮಧ್ಯಂತರ ಚುನಾವಣೆ ನಡೆಸಿ: ಚಿರಾಗ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು. ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಮಂಗಳವಾರ ಆಗ್ರಹಿಸಿದ್ದಾರೆ.

ಜೆಡಿ(ಯು) ನಾಯಕ ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಸಖ್ಯ ತೊರೆದು ಆರ್‌ಜೆಡಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆ ಕೈಜೋಡಿಸಿ ಸರ್ಕಾರ ರಚನೆಗೆ ಮುಂದಾದ ಬೆನ್ನಲ್ಲೇ ಚಿರಾಗ್ ಪಾಸ್ವಾನ್ ಈ ಹೇಳಿಕೆ ನೀಡಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ಇತರರು 9 ವರ್ಷಗಳಲ್ಲಿ ಮೂರನೇ ಬಾರಿ ಜನಾದೇಶಕ್ಕೆ ಅವಮಾನ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.

‘ನಿತೀಶ್ ಕುಮಾರ್ ಮತ್ತೊಮ್ಮೆ ಜನಾದೇಶಕ್ಕೆ ಅವಮಾನ ಮಾಡಿದ್ದಾರೆ. ಅವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಒಂದು ಬಾರಿ ಒಬ್ಬರೊಂದಿಗೆ ಹೋಗುವುದು, ಮತ್ತೊಮ್ಮೆ ಮತ್ತೊಬ್ಬರೊಂದಿಗೆ ಹೋಗುವುದು. ಇದೇನು ತಮಾಷೆಯೇ? ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ. ಹೊಸ ಜನಾದೇಶಕ್ಕಾಗಿ ಚುನಾವಣೆ ನಡೆಸಬೇಕು’ ಎಂದು ಚಿರಾಗ್ ಹೇಳಿದ್ದಾರೆ.

ನಿತೀಶ್ ಅವರು ಸಾಧ್ಯವಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸಲಿ ಎಂದು ಅವರು ಸವಾಲೆಸೆದಿದ್ದಾರೆ.

‘ನಿತೀಶ್ ಅವರ ಪಕ್ಷ ಎಂದಿಗೂ ಏಕಾಂಗಿಯಾಗಿ ಚುನಾವಣೆ ಎದುರಿಸಿಲ್ಲ. ಬೇರೊಬ್ಬರ ಬೆಂಬಲದೊಂದಿಗೇ ಚುನಾವಣೆ ಎದುರಿಸಿದೆ. ಅವರ ಪಕ್ಷವನ್ನು ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಟ್ಟು ನೋಡಿ, ಜೆಡಿ(ಯು) ಸಾಧನೆ ಶೂನ್ಯವಾಗಲಿದೆ’ ಎಂದು ಚಿರಾಗ್ ವಾಗ್ದಾಳಿ ನಡೆಸಿದ್ದಾರೆ.

ಈ ಮಧ್ಯೆ, ‘ಮಹಾಘಟಬಂಧ’ನ (ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಮೈತ್ರಿ) ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ನಿತೀಶ್ ಕುಮಾರ್, ರಾಜಭವನಕ್ಕೆ ತೆರಳಿ ನೂತನ ಸರ್ಕಾರ ರಚನೆಗೆ ಹಕ್ಕುಮಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು